


ಕೋಟಿ ಕೋಟಿ
ದುಡ್ಡು ಸುರಿದು
ಹಗಲು ಇರುಳು
ಬೆವರು ಬಸಿದು
ಗಲ್ಲಿ ಗಲ್ಲಿಯಲ್ಲೂ
ಬೀದಿ ಬೀದಿಯಲ್ಲೂ
ನಡೆಯುತ್ತಿವೆ ಅಂತೆ
ನೂರೆಂಟು ರೂಪದಲ್ಲೂ
ಜಾಥ ಜಾಥ ಜಾಥ…
ಜನ ಜಾಗೃತಿ ಜಾಥ…
ಗುಟ್ಕಾ ತಂಬಾಕು ಜಗೆಯಬೇಡಿ
ಕಂಡ ಕಂಡಲ್ಲಿ ಉಗುಳಬೇಡಿ
ಸಿಗರೇಟು ಸೇದಬೇಡಿ
ಎಲ್ಲೆಂದರಲ್ಲಿ ಹೊಗೆಯ ಬಿಡಬೇಡಿ
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ
ನೋಡೋ ಅಣ್ಣ ಚಿತ್ರವನ್ನು
ನಮ್ಮನ್ನು ಕೇಳೋನು
ಯಾವನಲೇ ನೀನು
ನಡೆ ನುಡಿ ಹಳೆ ಕೊಳೆ
ಹೊಡಿರೀ ಅಪ್ಪಾ ಹೊಡಿರೀ
ಇನ್ನೂ ಜೋರಾಗಿ ಚಪ್ಪಾಳೆ
ದೊಡ್ಡ ಆಂದೋಲನವಿದು
ಪ್ರಸ್ತುತತೆಯ ಅರಿವು
ನಿರಂತರ ಅಭಿಯಾನವಿದು
ಸ್ವಾಸ್ತತೆಯ ಉಳಿವು
ವಿವಿಧ ಕಾರ್ಯಕ್ರಮ
ನಿತ್ಯ ರೂಪಿಸಿಕೊಂಡು
ಸಂಘ ಸಂಸ್ಥೆ ಸರಕಾರಗಳು
ಸಮಸ್ಯೆಗಳನ್ನು ಸವಾಲಾಗಿಸಿಕೊಂಡು
ಅತ್ತ ಇತ್ತ ನಿಮಿತ್ತ
ಜನ ಜಾಗೃತಿ ಜಾಥ…
ಹಣ ಹೆಂಡಕ್ಕೆ ಮಾರಿಕೊಳ್ಳಬೇಡಿ
ನಿಮ್ಮ ಮತ ಯಾರಿಗೂ
ತಪ್ಪದೇ ವೋಟು ಹಾಕಿ
ಒಳ್ಳೆಯ ಅಭ್ಯರ್ಥಿಗೂ
ಟಿವಿ ಪೇಪರ್ ನೋಡಿದ್ದೆ ಬಂತು
ಜಾತಿ ನೋಡಿ ಗುದ್ದಿದೆ ನಾನಂತೂ
ಇದ್ದದ್ದೇ ಇದೆಲ್ಲಾ ಎಂದು
ಪ್ರಜ್ಞಾವಂತರಲ್ಲೂ ಆಲಸ್ಯ ತಂತು
ಆ ಪದ್ದತಿ ಈ ಪದ್ದತಿ
ಸಾಮಾಜಿಕ ಅನಿಷ್ಠಗಳು
ಹೋಗದೆಂದು ಕುಣಿಯುತ್ತಿವೆ
ತೈ ತೈ ತಕತೈ ಅಡಿಯಾಳು
ಹಾಗೆ ಅಂದರೆ ಏನು
ಹೇಳೋರು ಹೇಳತಾರೆ ಬಿಡು
ಹೀಗೆ ಮಾಡಿದರೆ ಹೆಂಗೆ
ಮಾಡೋರು ಮಾಡತಾರೆ ನೋಡು
ಯಾರೇಷ್ಟು ಹೇಳಿದರೂ ಅಷ್ಟೇ
ಮನಸ್ಸಿಗೆ ಬಂದಂತೆ ಸಾಪಲ್ಯ
ಪೂರ್ವಾಗ್ರಹಗಳ ಅಸಹಕಾರ
ಕಾಣಿಸುವುದು ಸಮಾಜಕ್ಕೆ ವೈಫಲ್ಯ
ಗೋತಾ ಗೋತಾ ಗೋತಾ
ಜನ ಜಾಗೃತಿ ಗೋತಾ…
*ಬಸವರಾಜ ಕಾಸೆ*





