

“ಜೋಡುಪಾಲ ದಲ್ಲಿ ರಕ್ಷಿಸಲ್ಪಟ್ಟ ಮಾರ್ಜಾಲ”
ಮೌನೇಶ ವಿಶ್ವಕರ್ಮ
ನಿಂತಿಕಲ್ : ಆ ದಿನ ಆ ಮಿನ್ನುವನ್ನು ಆ ವ್ಯಕ್ತಿ ಕರೆದುಕೊಂಡು ಬರದೇ ಇದ್ದಲ್ಲಿ ಅದೂ ನೀರುಪಾಲಾಗುತಿತ್ತು. ಹೌದು.. ಇದು ಜೋಡುಪಾಲದಲ್ಲಿ ಅರೆ ಜೀವಾವಸ್ಥೆಯಲ್ಲಿದ್ದು ರಕ್ಷಿಸಲ್ಪಟ್ಟು ಸುಳ್ಯ ತಾಲೂಕಿನ ನಿಂತಿಕಲ್ ನ ಹೋಟೆಲ್ ಒಂದರಲ್ಲಿ ಬೆಳೆಯುತ್ತಿರುವ ಬೆಕ್ಕಿನ ಮರಿಯ ಕಥೆ.
ಜೋಡುಪಾಲದಲ್ಲಿ ಮಳೆಯ ತೀವ್ರತೆಯಿಂದ ಉಂಟಾದ ಭೂಕುಸಿತದ ಸಂದರ್ಭ ಅಲ್ಲಿನ ಸ್ಥಿತಿಗತಿ ನೋಡಲು, ಕಷ್ಟದಲ್ಲಿದ್ದವರಿಗೆ ನೆರವಾಗಲು ಆಸುಪಾಸಿನ ಊರಿನ ಜನತೆ ಭಾರೀ ಸಂಖ್ಯೆಯಲ್ಲಿ ಬಂದಿದ್ದರು. ಹಾಗೇ ಹೋದವರಲ್ಲಿ ನಿಂತಿಕಲ್ ನ ‘ಭವಿಷ್ಯ’ ಹೋಟೇಲ್ ಮಾಲಕ ಜಯರಾಮ ರೈ ಅವರೂ ಕೂಡ ಒಬ್ಬರು.
ಅಲ್ಲಿ ಅವರ ಕಣ್ಣಿಗೆ ಬಿದ್ದದ್ದು ಚಿಕ್ಕ ಬೆಕ್ಕಿನ ಮರಿ. ಮನೆ,ಮರ,ಧರೆ ಕುಸಿತದ ಆಘಾತದ ನಡುವೆ ಬೆಕ್ಕಿನ ಮರಿಯೊಂದು ಒಂದೆಡೆ ಅವಿತು ಕುಳಿತಿತ್ತು. ಇವರನ್ನು ಕಂಡಾಕ್ಷಣವೇ ‘ಮ್ಯಾವ್’ ಎಂದು ಕೂಗಿದ ಬೆಕ್ಕಿನ ಮರಿಯನ್ನು ಇವರು ತಕ್ಷಣವೇ ಹತ್ತಿರ ಕರೆದರು. ಅದು ಯಾವ ಸೂಚನೆಗೆ ಕಾಯುತ್ತಿತ್ತೋ ಏನೋ, ತಕ್ಷಣವೇ ಇವರ ಬೈಕ್ ಏರಿತ್ತು. ಆ ಕ್ಷಣವೇ ಅದನ್ನು ರಕ್ಷಿಸುವ ಕೆಲಸವೂ ಆಯ್ತು ಎಂಬಂತೆ ಬೆಕ್ಕನ್ನು ನಿಂತಿಕಲ್ ನ ತಮ್ಮ ಹೋಟೆಲ್ ಗೆ ತಂದರು. ಆಗ ಎರಡು ತಿಂಗಳ ಪ್ರಾಯದ ಬೆಕ್ಕಿನ ಮರಿ ಇದೀಗ ವರ್ಷ ಕಳೆದು ದೊಡ್ಡದಾಗಿ ಬೆಳೆದಿದೆ.ಜಯರಾಮರ ಪತ್ನಿ ಪುಷ್ಪಲತಾ ರವರೂ ಬೆಕ್ಕನ್ನು ಅತೀ ಮುದ್ದಿನಿಂದ ಸಾಕುತ್ತಿದ್ದು, ಅಕ್ಕಪಕ್ಕದ ಅಂಗಡಿಯವರ ಮುದ್ದಿನ “ಮಿನ್ನು” ಆಗಿ ಬೆಳೆಯುತ್ತಿದೆ.







