ಮಳೆಗಾಲ. ಚಟ್ನಿಪುಡಿ, ಉಪ್ಪಿನಕಾಯಿ, ಹಪ್ಪಳ, ಹೋಳುಗಳು, ಸೆಂಡಿಗೆ ಮಾಡಿಡಲು ಯಾರಿಗಿದೆ ಸಮಯ? ರೆಡಿ ಮಾಡಲು, ಬೇಯಿಸಲು,ಒಣಗಿಸಲು, ಕಾಯಿಸಲು ಸಮಯ ಹೇಗಿಲ್ಲವೋ ಹಾಗೆ ಕುಳಿತು ತಿನ್ನಲಿಕ್ಕೂ ಸಮಯವಿಲ್ಲ ಈಗ! ಎಲ್ಲರೂ ದುಡಿಯುವವರೇ, ಎಲ್ಲರೂ ಶ್ರೀಮಂತರೇ, ಆದರೆ ಹೃದಯದಲ್ಲಲ್ಲ! ಸಹಾಯಕ್ಕೆ ಯಾರೂ ಬರಲಾರರು! ಜನರಿಗೆ ಫೋನ್ ಮಾಡಿದರೆ ಮಾತನಾಡಲೂ ಸಮಯವಿಲ್ಲ, ಸಾಮಾಜಿಕ ಜಾಲ ತಾಣಗಳ ಹೊರತಾಗಿ!
ಇಂಥ ಯುಗದಲ್ಲಿ ಫಾಸ್ಟ್ ಲೈಫ್, ಫಾಸ್ಟ್ ಫುಡ್, ರೆಡಿಮೇಡ್ ಊಟ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿದೆ! ಹಾಗಿರುವಾಗ ಜೊತೆಜೊತೆಗೇ ರೋಗಗಳೂ ಕೂಡಾ. ದುಬಾರಿ ಚಿಕಿತ್ಸೆ! ರೋಗಗಳು ಬಂದ ಮೇಲೆ ಮಾಡುವ ಪರಿಹಾರಕ್ಕಿಂತ ರೋಗಗಳು ಬರದಂತೆ ತಡೆಯುವುದು ಮೇಲಲ್ಲವೇ?
ಅದಕ್ಕಾಗಿ ಉತ್ತಮ ಆರೋಗ್ಯ ನಿಯಮಗಳ ಪಾಲನೆಯನ್ನು ನಾವೇ ಮಾಡಿಕೊಳ್ಳಬೇಕು. ಕಂಡ ಕಂಡಲ್ಲಿ ಸಿಕ್ಕಿದ್ದನ್ನು ತಿಂದು ಹೊಟ್ಟೆಯನ್ನು ಕಸದ ಡಬ್ಬಿಯನ್ನಾಗಿ ಮಾಡದೆ, ಸರಿಯಾದ ಸಮಯಕ್ಕೆ ಬೇಕಾದಷ್ಟೆ ತಿಂದು ಆರೋಗ್ಯ ಬಿಗಡಾಯಿಸದೆ ಇರಿಸಬೇಕಾಗಿದೆ.
ನಿಮ್ಮ ಆರೋಗ್ಯ ಕೆಟ್ಟರೆ ನಿಮಗೆ ನೋವು ಮಾತ್ರ, ಕಷ್ಟ ನಿಮ್ಮನ್ನು ಅವಲಂಬಿಸಿ ಬದುಕುತ್ತಿರುವವರಿಗೆ ಎಂಬುದು ನೆನಪಿರಲಿ. ನಾವು ಇತರರಿಗೆ ಭಾರವಾಗಿ ಬದುಕುವಂತಾಗಬಾರದು. ಅದಕ್ಕಾಗಿ ಕುಡಿತ, ಹೊಗೆಸೊಪ್ಪು, ಸಿಗರೇಟು, ಬೀಡಿ ಮೊದಲಾದ ತಂಬಾಕು ಉತ್ಪನ್ನ ಹಾಗೂ ಅಮಲು ಪದಾರ್ಥಗಳ ಬಳಕೆ ನಿಲ್ಲಿಸುವುದಲ್ಲದೆ, ಮನೆ ಮನಗಳನ್ನೂ ಸ್ವಚ್ಛವಾಗಿರಿಸಿಕೊಳ್ಳಬೇಕು.
ಮಳೆ ನೀರಿಗೆ ಕಾಲುಗಳ ಸ್ವಚ್ಛತೆ ಅತ್ಯವಶ್ಯಕ. ನಿಂತ ನೀರನ್ನು ತುಳಿದಾಗ ಅದರಲ್ಲಿನ ಫಂಗಸ್ ಕಾಲಿಗೆ ಅಂಟಿ, ತುರಿಕೆ, ನವೆ ಉಂಟಾಗುತ್ತದೆ. ಕಾಡು, ಗುಡ್ಡ, ತೋಟಗಳಲ್ಲಿ ನಡೆಯುವಾಗ ಜಿಗಣೆಗಳು ಅಂಟಿಕೊಂಡು ತುಂಬಾ ರಕ್ತ ಹೀರಿ ಬಳಿಕ ಬಿದ್ದು ಹೋಗುತ್ತವೆ. ಬಳಿಕ ನಮ್ಮ ಕಾಲು ಕಡಿತ ಪ್ರಾರಂಭವಾಗಿ ಕಡಿಮೆಯಾಗುವುದೇ ಇಲ್ಲ. ಇದನ್ನೆಲ್ಲ ತಡೆಯುವಂತಾಗಬೇಕು.
ಶೂ ಧರಿಸಬೇಕು.
ಜಾಗರೂಕರಾಗಿರಿ. ನಿಮ್ಮ ಕೈಕಾಲುಗಳ ಬಗ್ಗೆ. ಮುಖಕ್ಕೆ ಮಾತ್ರ ಮೇಕಪ್ ಮಾಡುವುದಲ್ಲ. ನೀವೇನಂತೀರಿ?

@ಪ್ರೇಮ್@

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here