ವಿಟ್ಲ: ನಿರಂತರ ಜನರಲ್ಲಿ ಸುಳ್ಳು ಹೇಳಿಕೊಂಡು ಮೋಸ ಮಾಡುತ್ತಿದ್ದ ಕಾಂಗ್ರೆಸ್ ಈ ಬಾರಿಯ ಲೋಕಸಭೆಯ ಚುನಾವಣೆಯ ಬಳಿಕ ಹೇಳಹೆಸರಿಲ್ಲದಂತಾಗಿದೆ. ಇನ್ನು ಕನಿಷ್ಠ 25 ವರ್ಷಗಳ ಕಾಲ ಕೇಂದ್ರದಲ್ಲಿ ಎನ್‌ಡಿಎ ಆಡಳಿತಕ್ಕೆ ಯಾವುದೇ ಆತಂಕವಿಲ್ಲ ಎಂದು ಹಿಂದೂ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಅವರು ಗುರುವಾರ ರಾತ್ರಿ ಪುಣಚ ಪರಿಯಾಲ್ತಡ್ಕ ಜಂಕ್ಷನ್‌ನಲ್ಲಿ ನಡೆದ ಕಾರ್‍ಯಕರ್ತರಿಗೆ ಅಭಿನಂದನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜಗತ್ತಿನ ಪ್ರಭಾವಿ ರಾಷ್ಟ್ರಗಳೇ ಹುಬ್ಬೇರಿಸುವಂತೆ ಮಾಡಿದ ನರೇಂದ್ರ ಮೋದಿಯನ್ನು ಇಲ್ಲಸಲ್ಲದ ಕೀಳು ಮಟ್ಟದ ನಿಂದನೆ, ಟೀಕೆ ಮಾಡಿದ ಕಾಂಗ್ರೆಸ್, ಹಾಗೂ ದೇಶದ ನಾನಾ ರಾಷ್ಟ್ರೀಯ ಮತ್ತು ನಾನಾ ಪ್ರಾದೇಶಿಕ ಪಕ್ಷಗಳಿಗೆ ಮೋದಿ ಟೀಕೆಯ ಪರಿಣಾಮವನ್ನು ಜನರೇ ತಿಳಿಸಿಕೊಟ್ಟಿದ್ದಾರೆ. ಕೊಳ್ನಾಡು ಜಿಲ್ಲಾ ಪಂಚಾಯಿತಿ ಸದಸ್ಯ ಚುನಾವಣೆಯ ಪೂರ್ವದಲ್ಲಿ ಬಿಗಿದ ಕೀಳು ರಾಜಕೀಯ ಭಾಷಣ ಬಿಜೆಪಿಯ ಗೆಲುವಿಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗಿಲ್ಲ ಎಂದು ತಿಳಿಸಿದ ಅವರು ಇನ್ನು ೫ ವರ್ಷಗಳಲ್ಲಿ ಜಗತ್ತೇ ಅಚ್ಚರಿಯಿಂದ ನೋಡುವ ರೀತಿಯಲ್ಲಿ ದೇಶದ ಚಿತ್ರಣ ಬದಲಾವಣೆಯಾಗಲಿದೆ ಎಂದರು.
ಹಿಂದೂ ಮುಖಂಡರಾದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಬಜರಂಗ ದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕ, ಬಿಜೆಪಿ ತಾಲೂಕು ಮಂಡಲದ ಕಾರ್‍ಯದರ್ಶಿ ರಾಮಕೃಷ್ಣ ಮೂಡಂಬೈಲು ಮಾತನಾಡಿದರು.
ಪುಣಚ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಎಂ. ದಲ್ಕಜೆಗುತ್ತು ಸ್ವಾಗತಿಸಿದರು. ಕಾರ್‍ಯದರ್ಶಿ ಪ್ರವೀಣ್ ಕುಮಾರ್ ಬೊಳ್ಳರಡ್ಕ ವಂದಿಸಿದರು. ಜಗದೀಶ್ ಮಾರಮಜಲು ಕಾರ್‍ಯಕ್ರಮ ನಿರೂಪಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here