ಓಟು, ಫಲಿತಾಂಶ ಎಲ್ಲ ಮುಗಿದಾಯ್ತು! ಇಂದಿನಿಂದ ಶಾಲೆಗಳ ಪುನರಾರಂಭ. ನಮ್ಮ ಬಾಲ್ಯ ನೆನಪಾಗುತ್ತದೆ. ಆಗೆಲ್ಲಾ ಎಪ್ರಿಲ್ ಹತ್ತಕ್ಕೆ ಫಲಿತಾಂಶ ಬಂದು ರಜೆ ಕೊಟ್ಟರೆ ಜೂನ್ ಒಂದರಂದೇ ಶಾಲೆ ಪ್ರಾರಂಭ. ಆ ದಿನಕ್ಕೆ ಕಾಯುತ್ತಿದ್ದೆವು ನಾವು. ಈಗಿನಂತೆ ವರುಷಕ್ಕೊಂದು ಹೊಸ ಬ್ಯಾಗ್ ಇಲ್ಲದಿದ್ದರೂ, ಹೊಸ ಪುಸ್ತಕಗಳು, ಹೊಸ ನೀಲಿ-ಬಿಳಿ ಬಟ್ಟೆ, ಹೊಸ ಕೊಡೆ! ಹೌದು! ಆಗಿನ ಸಡಗರವೇ ಬೇರೆ. ಪುಸ್ತಕದ ಪಟ್ಟಿಯಲ್ಲಿದ್ದ ಪುಸ್ತಕಗಳನ್ನೆಲ್ಲ ತಂದು ವಾರಕ್ಕೆ ಮೊದಲೇ ಬೈಂಡ್ ಹಾಕಿ, ಲೇಬಲ್ ಹಾಕಿ ಬ್ಯಾಗ್ ನಲ್ಲಿ ತುಂಬಿಸಿ ಇಟ್ಟರೆ, ಬಟ್ಟೆ ಪೀಸ್ ತೆಗೆದುಕೊಂಡು ಟೈಲರಲ್ಲಿ ಕೊಟ್ಟಿದ್ದಿದ್ದರೆ ನಾವು ಶಾಲೆಗೆ ಹೋಗಲು ರೆಡಿ ಆದಂತೆ!
ಈಗಿನ ಮಕ್ಕಳಿಗೆ ಶಾಲೆಗೆ ಹೋಗುವುದೆಂದರೆ ಅಲರ್ಜಿ, ಬೇಸರ, ಬೋರು. ಕಾರಣ ಅಲ್ಲಿ ಫೇಸ್ ಬುಕ್, ಟ್ವಿಟರ್, ಯೂಟ್ಯೂಬ್, ಟಿಕ್ ಟಾಕ್, ವಿ ಚಾಟ್, ಹೆಲೋ ಯಾವುದೂ ನೋಡಲಾಗದು..ಎಡಿಟ್ ಮಾಡಿ ಹಾಕಲಾಗದು, ಬಿದ್ದುಕೊಂಡು ಮೊಬೈಲ್ ಒತ್ತಲಾಗದು! ಟಿ.ವಿ ನೋಡಲಾಗದು, ಮನೆಯ ಹಾಗೆ ಕುಳಿತಲ್ಲಿಗೇ ಯಾರೂ ಊಟ ತಂದು ಕೊಡಲಾರರು! ತರಕಾರಿ ಸಾಂಬಾರಿನಲ್ಲಿ ಊಟ ಸೇರದು, ಹಾಲಂತೂ ಕುಡಿಯಲು ಬೇಡವೇ ಬೇಡ! ಶಿಕ್ಷಕರ ಶಿಸ್ತೆಂದರೆ ಆಗದು. ಸ್ನೇಹಿತರೊಡನೆ ಹರಟೆ ಹೊಡೆಯುವುದು ಬಿಟ್ಟರೆ ಮತ್ಯಾವ ಕೆಲಸವೂ ಇಷ್ಟವಾಗದ ಹಲವಾರು ವಿದ್ಯಾರ್ಥಿಗಳಿದ್ದಾರೆ.
ಗುರಿ, ಉದ್ದೇಶಗಳು ಜೀವನದಲ್ಲಿರಬೇಕು, ಅದಕ್ಕಾಗಿ ಪ್ರತಿ ಕ್ಷಣ ನಮ್ಮ ಹಿರಿಯರು ಬುದ್ಧಿವಾದ ಹೇಳುತ್ತಿರುತ್ತಾರೆ. ನಮಗದು ಕಹಿಯೆನಿಸಿದರೂ ಬದುಕಲು ಬೇಕಾದ ಔಷಧವದು. ತೆಗೆದುಕೊಳ್ಳಲೇ ಬೇಕು. ತಂದೆ, ತಾಯಿ, ಹಿರಿಯರ ಮಾರ್ಗದರ್ಶನವಿರದ ಅನಾಥ ಮಕ್ಕಳು ಕೆಟ್ಟ ಬುದ್ಧಿ ಕಲಿತು ತಮ್ಮ ಜೀವನವನ್ನು ನರಕ ಮಾಡಿಕೊಳ್ಳುವುದನ್ನು ನಿಜ ಜೀವನದಲ್ಲೂ, ಸಿನೆಮಾದಲ್ಲೂ ನೋಡಿದ್ದೇವೆ.
ಅದೇನೇ ಇರಲಿ, ಬಾಳಿಗೊಂದು ಗುರಿಯಿರಲಿ, ಯಾವ ಶಾಲೆಯಾದರೂ ಸರಿ, ಕಲಿಯುವ ಛಲ ನಿಮ್ಮಲ್ಲಿರಲಿ. ಎಲ್ಲರಿಗೂ ಒಳ್ಳೆಯದಾಗಲಿ. ನೀವೇನಂತೀರಿ?

 

@ಪ್ರೇಮ್@

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here