Friday, October 27, 2023

ಪುರಸಭಾ ವ್ಯಾಪ್ತಿಗೆ ನೀರು ಪೂರೈಕೆಯಲ್ಲಿ ಅಡಚಣೆ: ಶಾಸಕ ರಾಜೇಶ್ ನಾಯ್ಕ್ ಭೇಟಿ

Must read

ಬಂಟ್ವಾಳ: ಬಂಟ್ವಾಳ ಪಟ್ಟಣಕ್ಕೆ ಪೂರೈಕೆಯಾಗುವ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯ ಜಕ್ರಿಬೆಟ್ಟು ನದಿಕಿನಾರೆಯಲ್ಲಿರುವ ಮೂಲ ಸ್ಥಾವರದಲ್ಲಿರುವ ಇಂಟೆಕ್‌ವೆಲ್‌ನಲ್ಲಿ ಮುರಳುಮಿಶ್ರಿತ ಹೂಳು ತುಂಬಿರುವುದರಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ.
ಪುರಸಭಾ ವ್ಯಾಪ್ತಿಯ ನೇತ್ರಾವತಿ ನದಿಯನ್ನು ಮೂಲವಾಗಿರಿಸಿಕೊಂಡು ಯು.ಐ.ಡಿ.ಎಸ್.ಎಸ್.ಎಂ.ಟಿ ಯೋಜನೆಯಡಿ 57.79 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ನೇತ್ರಾವತಿ ನದಿ ತೀರದಲ್ಲಿ ಇಂಟೆಕ್ ವೆಲ್, ಜ್ಯಾಕ್‌ವೆಲ್, ಕನೆಕ್ಟಿಂಗ್ ಪೈಪ್‌ಲೈನ್ ಅಳವಡಿಸಲಾಗಿದ್ದು, ಜಕ್ರಿಬೆಟ್ಟುವಿನಲ್ಲಿ ಜಲಶುದ್ದೀಕರಣ ಘಟಕ ಮತ್ತು ರೇಚಕ ಸ್ಥಾವರ ನಿರ್ಮಿಸಲಾಗಿದೆ. ಆದರೆ, ಈ ರೇಷಕ ಸ್ಥಾವರದ ಇಂಟೆಕ್‌ಚವೆಲ್‌ನಲ್ಲಿ ಹೂಳು ತುಂಬಿದ್ದು, ಪುರವಾಸಿಗಳಿಗೆ ನೀರಿನ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ.
ಜಕ್ರಿಬೆಟ್ಟುವಿನ ಮೂಲಸ್ಥಾವರಲ್ಲಿ ನೀರು ಪೂರೈಕೆಯಲ್ಲಿ ಅಡಚಣೆಯಾಗಿರುವ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಗುರುವಾರ ಮಧ್ಯಾಹ್ನ ಘಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದ ಅವರು, ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ಮೂಲಸ್ಥಾವರದ ಇಂಟೆಕ್‌ವೆಲ್‌ನ ಫಿಲ್ಟರ್ ಭಾಗದಲ್ಲಿ ಹೂಳು ತುಂಬಿರುವುದರಿಂದ ಪಂಪಿಂಗ್ ಮೂಲಕ ನೀರು ಕಡಿಮೆ ಸಾಮರ್ಥ್ಯದಲ್ಲಿ ಪೂರೈಕೆಯಾಗುತ್ತಿದೆ.
ಅದಲ್ಲದೆ, ಮಣ್ಣು ಮಿಶ್ರಿತ ನೀರು ಜಾಕ್‌ವೆಲ್‌ಗೆ ಬರುತ್ತಿದೆ. ಈ ನಿಟ್ಟಿನಲ್ಲಿ ಇಂಟೆಕ್‌ವೆಲ್ ಸುತ್ತಮುತ್ತಲ ಭಾಗದಿಂದ ಹೂಳು ತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಜಲಮಂಡಳಿಯ ಅಧಿಕಾರಿ ಶೋಭಾಲಕ್ಷ್ಮೀ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಪುರಸಭಾ ಸದಸ್ಯ ಗೋವಿಂದ ಪ್ರಭು ಮತ್ತಿರರು ಹಾಜರಿದ್ದರು.

More articles

Latest article