ಬಂಟ್ವಾಳ: ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಮಿನಿವಿಧಾನ ಸೌಧದ ಕಚೇರಿಯಲ್ಲಿರುವ ಸೌಕರ್ಯಗಳು ನಿಷ್ಕ್ರಿಯವಾಗಿದ್ದು ಇಲ್ಲಿಗೆ ಬರುವ ಜನರು ತೊಂದರೆ ಅನುಭವಿಸುತ್ತಿದ್ದಾರೆ .
ಕಳೆದ ಒಂದು ತಿಂಗಳಿನಿಂದ ಮಿನಿವಿಧಾನ ಸೌಧ ಕಚೇರಿಯಲ್ಲಿನ ಲಿಪ್ಟ್ ಕೆಟ್ಟು ಹೋಗಿದ್ದು ವಿಕಲಚೇತನರ ಸಹಿತ ಅನಾರೋಗ್ಯ ಪೀಡಿತ ಜನರು ಮೆಟ್ಟಿಲುಗಳ ಮೂಲಕ ಹತ್ತಿಹೋಗಬೇಕಾದ ಪರಿಸ್ಥಿತಿ ಬಂದಿದೆ.
ಈ ಬಗ್ಗೆ ಸಾರ್ವಜನಿಕರು ಇಲ್ಲಿನ ಅಧಿಕಾರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಂದು ಬೆಳಿಗ್ಗೆ ಮಿನಿವಿಧಾನ ಸೌಧದ ಮೇಲಿನ ಅಂತಸ್ತಿಗೆ ವಿಕಲ ಚೇತನ ವ್ಯಕ್ತಿಯೋರ್ವರು ಹೋಗಲು ಪಡುತ್ತಿದ್ದ ಕಷ್ಟ ಅಲ್ಲಿ ನೆರದಿದ್ದವರ ಮನಸ್ಸಿನ ಮೇಲೆ ಪರಿಣಾಮ ಬೀರಿತು.
ಮೂರನೇ ಅಂತಸ್ತಿನ ಮಹಡಿಯ ಮೇಲೆ ವಿಕಲಚೇತನೋರ್ವರು ಮೆಟ್ಟಿಲು ಮೂಲಕ ಮೇಲೆ ಹೋಗಲು ಬಹಳ ಕಷ್ಟ ಪಡಬೇಕಾಯಿತು.
ಕಳೆದ ಒಂದು ತಿಂಗಳಿನಿಂದ ಕಚೇರಿಯಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಬಗ್ಗೆ ತಹಶೀಲ್ದಾರರಿಗೆ ಸರಿ ಮಾಡುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳದ ಜನತೆಯ ಗೌರವದ ಸಂಕೇತವಾಗಿರುವ ಮಿನಿವಿಧಾನ ಸೌಧದ ಅವ್ಯವಸ್ಥೆ ಮಾತ್ರ ಎಲ್ಲರನ್ನು ತಲೆ ತಗ್ಗಿಸುವಂತೆ ಮಾಡಿದೆ.

 

ನಿರ್ವಹಣೆ ಯಾರದು?: ಸರಕಾರ ಕೋಟ್ಯಾಂತರ ರೂ. ಖರ್ಚು ಮಾಡಿ‌ ಸುಸಜ್ಜಿತ ರೀತಿಯಲ್ಲಿ ಬಿ.ಸಿ.ರೋಡಿನ ಮಿನಿವಿಧಾನ ಕಚೇರಿಯನ್ನು ನಿರ್ಮಾಣ ಮಾಡಿದೆ.

ತಾಲೂಕಿನ ಜನರು ಬೇರೆ ಬೇರೆ ಕಡೆ ಕಚೇರಿಯ ಕೆಲಸಕ್ಕಾಗಿ ಅಳೆದಾಡಬಾರದು ಎಂಬ ಉದ್ದೇಶದಿಂದ ಒಂದೇ ಸೂರಿನಡಿ ಬಹುತೇಕ ಎಲ್ಲಾ ಕಚೇರಿಗಳು ಕೆಲಸ ಮಾಡುವಂತೆ ಮಿನಿವಿಧಾನ ಸೌಧ ನಿರ್ಮಾಣ ಮಾಡಲಾಯಿತು.
ಆದರೆ ಸರಕಾರ ಜನರಿಗೆ ನೀಡಿದ ಈ ಮಿನಿ ವಿಧಾನ ಸೌಧದ ಅವಸ್ಥೆ ಮಾತ್ರ ಹೇಳಲು ಅಸಹ್ಯವಾಗುತ್ತಿದೆ.
ಈ ಕಚೇರಿಯ ನಿರ್ಮಾಣ ಮಾಡಿದ ಬಂಟ್ವಾಳ ಲೋಕೋಪಯೋಗಿ ಇಲಾಖೆ ಒಂದು ವರ್ಷದ ವರೆಗೆ ಅದರ ಸಂಪೂರ್ಣ ಜವಬ್ದಾರಿ ಯನ್ನು ವಹಿಸಿಕೊಂಡು ನಿರ್ವಹಣೆ ಮಾಡಿತ್ತು.
ಆ ಬಳಿಕ ಇದರ ನಿರ್ವಹಣೆ ಕಂದಾಯ ಇಲಾಖೆ ಮಾಡಬೇಕು ಎಂಬುದು ಅವರ ಮಾತು.
ಆದರೆ ಇದರ ಕಾಮಗಾರಿಯಲ್ಲಿ ಲೋಪಗಳು ಆಗಿವೆ. ಕಳಪೆಯಾಗಿದೆ ಎಂಬುದು ಸಾರ್ವಜನಿಕರ ಆರೋಪ.‌ ಮಿನಿವಿಧಾನ ಸೌಧ ನಿರ್ಮಾಣ ವಾದ ಕೆಲವೇ ತಿಂಗಳಲ್ಲಿ ಮಳೆ ಬಂದಾಗ ಮಳೆ ನೀರು ಸೋರಿಕೆಯಾಗಿ ಇಲ್ಲಿನ ಅನೇಕ ಕಚೇರಿ ಪೈಲುಗಳು ಒದ್ದೆಯಾಗಿತ್ತು.

ಅವ್ಯವಸ್ಥೆ ಯ ತಾಣ: ಇಲ್ಲಿ ನ ವ್ಯವಸ್ಥೆ ಗಳ ಬಗ್ಗೆ ಯಾರೂ ಹೇಳುವವರು ಕೇಳುವವರು ಇಲ್ಲ ಎಂಬಂತೆ ಆಗಿದೆ.
ದೂರದೂರಿನಿಂದ ಗ್ರಾಮೀಣ ಭಾಗದಿಂದ ಬರುವ ಜನರ ಕೆಲಸಗಳು ವ್ಯವಸ್ಥಿತವಾಗಿ ನಡೆಯದೆ ಅವರ ಅಳೆದಾಡುವ ಸ್ಥಿತಿ ಉಂಟಾಗಿತ್ತು.
ವಿದ್ಯುತ್ ಪೂರೈಕೆ ಕಡಿತಗೊಂಡ ದಿನಗಳಲ್ಲಿ ಇಲ್ಲಿನ ಯಾವುದೇ ಕೆಲಸಗಳು ನಡೆಯುತ್ತಿರಲಿಲ್ಲ.
ಈ ಇಲಾಖೆ ಗೆ ಬೇಕಾಗುವ ವಿದ್ಯುತ್ ಪೂರೈಕೆ ಮಾಡುವ ಶಕ್ತಿ ಇರುವ ಜನರೇಟರ್ ಇಲ್ಲಿ ಇದ್ದರೂ ಡೀಸೆಲ್‌ ಹಾಕಲು ಹಣವಿಲ್ಲ ಎಂದು ತಹಶೀಲ್ದಾರರು ಹೇಳಿದ ಮಾತು ಸಾಕಷ್ಟು ಗೊಂದಲ‌ ಉಂಟು ಮಾಡಿಕ ಬಳಿಕ ಶಾಸಕರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿತ್ತು.
ಇಲ್ಲಿನ ಶೌಚಾಲಯ ದ ಸ್ಥಿತಿ ಕೂಡ ಇದೇ ರೀತಿ ಇತ್ತು.
ಇದರ ನಿರ್ವಹಣೆ ಯನ್ನು ಸರಿಯಾಗಿ ಮಾಡದೇ ಅದು ಸುದ್ದಿಯಾಗಿತ್ತು.
ಒಟ್ಟಿನಲ್ಲಿ ಅವ್ಯವಸ್ಥೆ ಯ ಆಗರವಾಗಿರುವ ಮಿನಿ ವಿಧಾನ ಸೌಧ ಕಛೇರಿಯನ್ನು ಸರಿ ಮಾಡುವ ಕೆಲಸ ಆಗಬೇಕಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here