Sunday, October 22, 2023

ಕಾವಳಮೂಡೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ನೀರಿಲ್ಲ: ನಾಳೆ ಮುತ್ತಿಗೆ

Must read

ಸೋಮವಾರ ಪಂಚಾಯತ್ ಗ್ರಾಮಸ್ಥರ ಮುತ್ತಿಗೆಗೆ

ಕಾವಳಪಡೂರು ಪಂಚಾಯತ್
ಕಾಡಬೆಟ್ಟು, ಗೋರ್ಕಲ್, ಬಾಕ್ರಮಾರು, ಗುರಿಕಂಡ, ಅಜ್ಜಿಮಾರು ಜನರಿಗೆ ನೀರಿನ ಸಮಸ್ಯೆಗೆ ಯಾರೂ ಮುಂದೆ ಬರುವುದಿಲ್ಲ

ಬಿ.ಸಿ.ರೋಡು : ಪ್ರತಿಯೊಬ್ಬರಿಗೂ ನೀರು ತುಂಬಾ ಅವಶ್ಯ. ಜೀವಜಲವಿಲ್ಲದಿದ್ದರೆ ಯಾವ ಕೆಲಸವೂ ಸಾಗದು. ಆದರೆ ಇಲ್ಲೊಂದು ಪ್ರದೇಶದಲ್ಲಿ ಮೂರು ದಿನಕ್ಕೊಮ್ಮೆ ಕೇವಲ ೧೫ ನಿಮಿಷಗಳ ಕಾಲ ಮಾತ್ರ ಎಲ್ಲ ಮನೆಗಳಿಗೆ ನೀರು ಬರುತ್ತದೆ. ಇನ್ನೊಂದು ಕಡೆಯಿಂದ ನೀರು ತರೋಣವೆಂದರೆ ಸರಿಯಾದ ವ್ಯವಸ್ಥೆಯೂ ಇಲ್ಲ. ಹೆಚ್ಚಿನ ಎಲ್ಲಾ ಮನೆಯವರು ಪಂಚಾಯತ್ ನೀರಿಗೇ ಅವಲಂಬಿತರಾಗಿದ್ದಾರೆ. ಪಂಚಾಯತ್‌ವರಲ್ಲಿ ಸಮಸ್ಯೆ ತೋಡಿಕೊಂಡರೆ ಬಾವಿ ತೋಡುವಂತೆ ಸಲಹೆ ನೀಡುತ್ತಾರೆ. ಬಾವಿ ತೋಡಿದರೆ ನೀರು ಸಿಗುತ್ತದೆ. ಅದರಿಂದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುತ್ತದೆ ಎಂಬುದು ಪಂಚಾಯತ್ ಅನಿಸಿಕೆ. ಆದರೆ ಪಂಚಾಯತ್ ವತಿಯಿಂದ ನಿರ್ಮಾಣ ಮಾಡಲಾದ ೩ ಕೊಳವೆ ಬಾವಿಗಳೇ ನೀರಿಲ್ಲದೆ ಬತ್ತಿ ಹೋಗಿದೆ. ಇನ್ನು ಬಾವಿ ತೋಡಿದರೆ ಅದರಲ್ಲಿ ನೀರು ಸಿಗುವುದು ಸಂಶಯ. ಒಂದು ವೇಳೆ ಸಿಕ್ಕಿದರೂ ಅದು ಬೇಸಿಗೆ ಕಾಲದಲ್ಲಿ ಕೂಡ ಇರಬಹುದು ಎನ್ನುವುದರಲ್ಲಿ ಯಾರಿಗೂ ನಂಬಿಕೆ ಇಲ್ಲ. ಹೀಗಾಗಿ ವೃಥಾ ಹಣ ಖರ್ಚು ಮಾಡುವುದು ಸರಿಯೇ ಎಂಬ ಪ್ರಶ್ನೆ ಪಂಚಾಯತ್‌ನವರದ್ದು? ನೀರಿನ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳಿಗೆ, ಅಧಿಕಾರ ವರ್ಗದವರಿಗೆ ತಿಳಿದಿದ್ದರೂ ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಇತ್ತ ಕಡೆ ತಲೆಯೂ ಹಾಕುತ್ತಿಲ್ಲ. ಇನ್ನು ಏನೂ ಮಾಡಲೂ ಸಾಧ್ಯವಿಲ್ಲ. ಹಾಗಾಗಿ ಇದ್ದ ಪಾತ್ರೆಗಳನ್ನೆಲ್ಲಾ ಹಿಡಿದುಕೊಂಡು ನೀರಿಗಾಗಿ ಪಂಚಾಂiiತ್ ಕಚೇರಿಗೆ ಹೋಗಿ ಕುಳಿತುಕೊಳ್ಳುವುದೇ ಅನಿವಾರ್ಯವಾಗಿದೆ. ಇದು ಕಾವಳಪಡೂರು ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಕಾಡಬೆಟ್ಟು, ಗೋರ್ಕಲ್, ಬಾಕ್ರಮಾರು, ಗುರಿಕಂಡ, ಅಜ್ಜಿಮಾರು ಪರಿಸರದ ಜನರ ಅಳಲು.

ಬಂಟ್ವಾಳ-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವಾಗ ಬಂಟ್ವಾಳದಿಂದ ೧೩ ಕಿ.ಮಿ. ದೂರದಲ್ಲಿರುವ ಪ್ರದೇಶವೇ ಕಾವಳಪಡೂರು. ಕೆಳಗಿನ ವಗ್ಗ ದಾಟಿ ಶ್ರೀರಾಮ ಮಂದಿರದ ಬಳಿ ಕಾಡಬೆಟ್ಟು ಊರಿಗೆ ಹೋಗುವ ರಸ್ತೆ. ಈ ಪರಿಸರದಲ್ಲಿ ನೂರಾರು ಮನೆಗಳಿವೆ. ಎಲ್ಲರೂ ದೂರದ ನಗರಗಳಿಗೆ ತಮ್ಮ ಕೆಲಸಗಳಿಗೆ ಹೋಗಬೇಕಾಗುತ್ತದೆ. ಮನೆಯಲ್ಲಿ ನೀರು ಬರದಿರುವುದೇ ಈ ಊರಿನ ದೊಡ್ಡ ಸಮಸ್ಯೆ. ಮನೆಯಲ್ಲಿ ಹಿರಿಯ ನಾಗರಿಕರು, ಅನಾರೋಗ್ಯವಂತರೂ ಏನು ಮಾಡುವುದು ಎಂಬುದೇ ಅವರಿಗಿರುವ ಚಿಂತೆ. ನೀರಿನ ಸಮಸ್ಯೆಯಿಂದಾಗಿ ಮಕ್ಕಳನ್ನೆಲ್ಲಾ ನೆಂಟರ ಮನೆಗೆ ಕಳುಹಿಸಿದ್ದಾರೆ. ಗುರಿಕಂಡ ಪ್ರದೇಶದ ಜನರು ಒಂದು ಕಿ.ಮೀ ದೂರದಲ್ಲಿರುವ ಖಾಸಗಿಯವರ ಬಾವಿಯಿಂದಲೇ ನೀರನ್ನು ತಂದು ಬರುತ್ತಾರೆ.

ಅನುದಾನ ನೀಡುತ್ತೇವೆ ಬಾವಿ ತೋಡಿ ಎಂದು ಪಂಚಾಯತ್ ಅಂಬೋಣ. ಮೊದಲೇ ಬಂಡೆ ಕಲ್ಲುಗಳಿರುವ ಪ್ರದೇಶ. ಬಾವಿ ತೋಡಿದರೆ ನೀರು ಸಿಗುತ್ತದೆ ಎನ್ನುವ ಧೈರ್ಯವೇ ಇಲ್ಲ. ಕಾಡಬೆಟ್ಟು-ವಾಮದಪದವು ನೂತನ ರಸ್ತೆ ಕಾಮಗಾರಿಯ ವೇಳೆ ರೋಲರ್ ಹೋಗುವ ಸಂದರ್ಭ ಮಣ್ಣು ಕುಸಿತದಿಂದ ೨೦ ವರ್ಷದಿಂದ ಪಂಚಾಯತ್‌ಗೆ ಜೀವಾಳವಾಗಿದ್ದ ಕೊಳವೆ ಬಾವಿ ಹಾಳಾಯಿತು. ತುಂಬಾ ಒರತೆ ಇರುವ ಕೊಳವೆ ಬಾವಿ ಇದಾಗಿದ್ದುದರಿಂದ ಪಂಚಾಯತ್ ಅದರ ಬಗ್ಗೆ ಗಮನ ಹರಿಸಿದ್ದರೆ ನಮ್ಮ ಊರಿಗೆ ನೀರಿನ ಸಮಸ್ಯೆ ಬರುತ್ತಿರಲಿಲ್ಲ. ಈಗ ಮೂರು ದಿನಕ್ಕೊಮ್ಮೆ ೧೫ ನಿಮಿಷ ಬರುವ ನೀರಿನಲ್ಲಿ ದಿನನಿತ್ಯದ ಎಲ್ಲಾ ಕೆಲಸ ಕಾರ್ಯಗಳನ್ನು ಹೇಗೆ ಮಾಡುವುದು ಎಂಬುದೇ ಇಲ್ಲಿಯ ಜನರ ಅಳಲು. ಪಂಚಾಯತ್ ಈ ವರ್ಷ ೨ ನೂತನ ಕೊಳವೆ ಬಾವಿ ತೋಡಿದೆ. ಆದರೆ ಎರಡರಲ್ಲಿಯೂ ನೀರಿಲ್ಲದೆ ಕೈ ಸುಟ್ಟುಕೊಂಡಿದೆ. ಮೊದಲಿದ್ದ ಕೊಳವೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರಿದೆ. ಆದರೆ ಅದು ಟಾಂಕಿಗೆ ಹೋಗುವುದಿಲ್ಲ. ಅಲ್ಲಿನ ಜನರಿಗೆ ನೀರಿಗಾಗಿ ಬದಲಿ ವ್ಯವಸ್ಥೆಯನ್ನೂ ಮಾಡಲಿಲ್ಲ. ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡುವ ಗೋಜಿಗೇ ಹೋಗಲಿಲ್ಲ. ಬಡ, ಮಧ್ಯಮ ವರ್ಗದ ಜನರಿರುವ ಈ ಊರಿನ ಜನತೆಯ ಕಷ್ಟ ಕೇಳುವದಕ್ಕೆ ಯಾರೂ ಮುಂದೆ ಬರುತ್ತಿಲ್ಲ.

*****************************

ಕಾಡಬೆಟ್ಟು ಪ್ರದೇಶ ಇಲ್ಲಿ ನೀರಿನ ಅರಿವು ತುಂಬಾ ಕಡಿಮೆ. ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಹೊಸ ೫ ಕೊಳವೆ ಬಾವಿಗಳನ್ನು ಮಾಡಿದ್ದು ಅದರಲ್ಲಿ ೧ರಲ್ಲಿ ಮಾತ್ರ ನೀರು ಸಿಕ್ಕಿದೆ. ಈಗ ಅದರಲ್ಲಿಯೂ ಕಡಿಮೆಯಾಗಿದೆ. ಕಾಡಬೆಟ್ಟು ಪ್ರದೇಶಲ್ಲಿ ಎತ್ತರ ಪ್ರದೇಶಕ್ಕೆ ನೀರು ಹೋಗುವುದಿಲ್ಲ. ತಗ್ಗು ಪ್ರದೇಶದವರು ತಮಗೆ ನೀರು ಬಂದ ಮೇಲೆ ಗೇಟ್‌ವಾಲ್ ಬಂದ್ ಮಾಡಿದರೆ ಸ್ವಲ್ಪ ಎತ್ತರ ಪ್ರದೇಶಕ್ಕೆ ನೀರು ಹೋಗಬಹುದು. ಇರುವ ನೀರನ್ನು ನಾವು ಸಮಾನಾಗಿ ಎಲ್ಲಾ ಜನರಿಗೆ ಸಿಗುವ ಹಾಗೆ ನಮ್ಮ ಪಂಚಾಯತ್ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದೇವೆ. ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಬಹುದು. ಆದರೆ ಅದರ ಬಿಲ್ಲಿಂಗ್‌ನಲ್ಲಿ ಸಮಸ್ಯೆಯಾಗುತ್ತದೆ. ನಮ್ಮ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆದಷ್ಟು ಬೇಗ ಆದರೆ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಬಹುದು. ನಾವು ಪಂಚಾಯತ್ ವತಿಯಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇವೆ.
– ಪ್ರಮೋದ್ ಕುಮಾರ್ ಕಾಡಬೆಟ್ಟು, ಅಧ್ಯಕ್ಷರು, ಗ್ರಾಮ ಪಂಚಾಯತ್ ಕಾವಳಪಡೂರು

******

ಕಾಡಬೆಟ್ಟು ಪ್ರದೇಶದವರಿಗೆ ೨ ದಿನಗಳಿಗೊಮ್ಮೆ ನೀರು ಬಿಡುತ್ತೇವೆ. ನನಗಿರುವ ಪಂಚಾಯತ್ ವ್ಯಾಪ್ತಿ ಪ್ರದೇಶದಲ್ಲಿ ನೀರಿನ ಒರೆತ ತುಂಬಾ ಕಡಿಮೆ. ಇರುವ ಟ್ಯಾಂಕಿನಿಂದ ನೀರು ಎತ್ತರ ಪ್ರದೇಶಕ್ಕೆ ಹೋಗುವುದು ತುಂಬಾ ಕಷ್ಟ. ಅಭಿವೃದ್ಧಿ ಅಧಿಕಾರಿಗೆ ತಿಳಿಸಿ ಅಲ್ಲಿನ ಜನರ ನೀರಿನ ಸಮಸ್ಯೆಯ ಬಗ್ಗೆ ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡುವ ಬಗ್ಗೆ ಕ್ರಮ ಕೈಗೊಳ್ಳಲು ತಿಳಿಸಲಾಗುವುದು.
– ವೀರೇಂದ್ರ, ಪಂಚಾಯತ್ ಸದಸ್ಯರು ಕಾವಳಪಡೂರು

******

ಕಾಡಬೆಟ್ಟು ಪರಿಸರದಲ್ಲಿ ನೀರಿನ ಸಮಸ್ಯೆ ತುಂಬಾ ಇದೆ. ಯಾರಲ್ಲಿ ಹೇಳುವುದು ಎಂದು ತಿಳಿಯುವುದಿಲ್ಲ. ಮೂರು-ನಾಲ್ಕು ದಿನಕ್ಕೊಮ್ಮೆ ೧೦ ನಿಮಿಷ ನೀರು ಬಂದರೆ ಏನು ಮಾಡುವುದು. ಪಂಚಾಯತ್‌ಗೆ ತಿಳಿಸಿದರೆ ಯಾವುದೇ ಪ್ರಯೋಜನವಿಲ್ಲ. ನಮಗೆ ನೀರಿನ ಬಿಲ್ಲೂ ತುಂಬಾ ಜಾಸ್ತಿ ಬರುತ್ತಿದೆ. ಮನೆ ಕೆಲಸಗಳಿಗೆ ಕುಡಿಯಲು ಖಾಸಗಿಯವರಿಂದ ಹಣ ಕೊಟ್ಟು ಎಷ್ಟೂಂತ ನಾವು ತರಬಹುದು. ಮೂಲ ಸೌಕರ್ಯದಲ್ಲಿ ಒಂದಾದ ನೀರು ನೀಡಬೇಕಾದದ್ದು ಪಂಚಾಯತ್ ಜವಾಬ್ದಾರಿ. ಬಾವಿತೋಡಲು ಅವಕಾಶ ಇದೆ ಎನ್ನುತ್ತಾರೆ. ಕೊಳವೆ ಬಾವಿಗೇ ನೀರಿಲ್ಲ. ಇನ್ನು ಬಾವಿಗೆ ಹೇಗೆ ನೀರು ಬರುವುದು. ಬಾವಿ ತೋಡುವುದು ಸುಲಭದ ಕೆಲಸವಾ ಕಡಿಮೆ ಎಂದರೂ ೬೦ ಸಾವಿರ ಬೇಕಾಗುತ್ತದೆ. ಪಂಚಾಯತ್ ಎನ್‌ಆರ್
= ರಮೇಶ್, ಸ್ಥಳೀಯ ನಿವಾಸಿ

*************

ಮೂರು ದಿನದಲ್ಲಿ ಕೆಲ ಹೊತ್ತು ಮಾತ್ರ ನೀರು ಬರುವುದರಿಂದ ಏನೂ ಪ್ರಯೋಜನವಿಲ್ಲ. ಗ್ರಾಮ ಪಂಚಾಂiiತ್ ಅಧಿಕಾರಿಗಳು ಬಾವಿ ತೋಡಲು ಸೂಚನೆ ನೀಡುತ್ತಾರೆ. ಈ ಪಾದೆಕಲ್ಲಿನಲ್ಲಿ ಹೇಗೆ ಬಾವಿ ತೋಡುವುದು. ನಮ್ಮ ಗ್ರಾಮ ಪಂಚಾಯತ್ ಅಧ್ಯಕ್ಷರಿಗೂ, ನಮ್ಮೂರಿನ ಶಾಸಕ ರಾಜೇಶ್ ನಾಯಕ್‌ರಿಗೂ ಗಮನ ತಂದಿದ್ದೇವೆ. ಯಾರೂ ಇದರ ಬಗ್ಗೆ ಗಮನ ಹರಿಸುವುದಿಲ್ಲ. ತಾಲೂಕಿನ ಬೇರೆ ಕೆಲವು ಪಂಚಾಂiiತ್‌ನವರೇ ನೀರಿನ ಸಮಸ್ಯೆ ಬಂದವರಿಗೆ ಅಲ್ಲಿಗೇ ಟ್ಯಾಂಕರ್‌ನಲ್ಲಿ ನೀರನ್ನು ಸರಬರಾಜು ಮಾಡಿ ಜನರಿಗೆ ಸ್ಪಂದನೆ ನೀಡಿದ್ದಾರೆ. ಆದರೆ ನಾವು ಎರಡು ತಿಂಗಳಿನಿಂದ ಸಮಸ್ಯೆಯಲ್ಲಿ ಮುಳುಗಿ ಹೋಗಿದ್ಧೇವೆ. ನೀತಿ ಸಂಹಿತೆ ಎಂದು ಕಾರಣ ಕೆಲವರು ಹೇಳುತ್ತಾರೆ. ಆದರೆ ನಮ್ಮ ಸಮಸ್ಯೆಗೆ ಪರಿಹಾರ ನೀಡಲು ಯಾರೂ ಮುಂದೆ ಬರುವುದಿಲ್ಲ.
– ದಾಮೋದರ್, ಸ್ಥಳೀಯ ನಿವಾಸಿ

*********

ಬೊಗ್ರುಮೇರು, ಗುರಿಕಂಡ ತುಂಬಾ ನೀರಿನ ಸಮಸ್ಯೆ ಇದೆ. ಬಳಿ ೨ ಹೊಸದಾಗಿ ಕೊಳವೆ ಬಾವಿ ತೋಡಿದ್ದೇವೆ. ಆದರೆ ಅದರಲ್ಲಿ ನೀರಿಲ್ಲ. ಹಳೆಯ ಕೊಳವೆ ಬಾವಿಗೆ ಕ್ರೆಶಿಂಗ್ ಮಾಡಿದ್ದೇವೆ. ಈಗ ಅದರಲ್ಲಿ ಸ್ವಲ್ಪ ಬರುತ್ತಿದೆ. ಟಾಸ್ಕ್‌ಪೋಸ್ಕ್‌ನಲ್ಲಿ ಇನ್ನೊಂದು ಕೊಳವೆ ಬಾವಿ ಮಾಡಲು ಕೇಳಿದ್ದೇವೆ. ಅದಕ್ಕೆ ಒಪ್ಪಿಗೆ ಸಿಕ್ಕಿದರೆ ಕೂಡಲೇ ಇನ್ನೊಂದು ತೋಡಲಾಗುವುದು. ಗ್ರಾಮಸ್ಥರಿಗೆ ಎನ್‌ಆರ್‌ಜಿಯಲ್ಲಿ ಬಾವಿ ತೋಡಲು ಅವಕಾಶ ಇದೆ. ಗ್ರಾಮಸ್ಥರಿಗೆ ಉತ್ಸಾಹ ಇದ್ದರೆ ಆ ಯೋಜನೆಯ ಸವಲತ್ತನ್ನು ಬಳಕೆ ಮಾಡಬಹುದು. ಮೇಲಧಿಕಾರಿಯವರ ಗಮನಕ್ಕೆ ತಂದು ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತೇನೆ.
– ಗಣೇಶ್ ಶೆಟ್ಟಿಗಾರ್, ಕಾರ್ಯದರ್ಶಿ ಕಾವಳಪಡೂರು ಗ್ರಾಮ ಪಂಚಾಯತ್

More articles

Latest article