ಹಜಾಜ್ ಸಮೂಹ ಸಂಸ್ಥೆಗಳ ಸ್ಥಾಪಕರು, ಹಿರಿಯ ಸಾಹಿತಿ, ಕವಿ, ಸಾಮಾಜಿಕ, ಧಾರ್ಮಿಕ ಮುಖಂಡರಾದ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಗೋಳ್ತಮಜಲು ನಿವಾಸಿ ಹಾಜಿ ಜಿ. ಅಬ್ದುಲ್ ಖಾದರ್ (87) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಬೆಳಿಗ್ಗೆ 08:00 ಗಂಟೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಗೋಳ್ತಮಜಲು ಅಬ್ದುಲ್ ಖಾದರ್ ಹಾಜಿ ಹಾಗೂ ಅವರ ಸಹೋದರ ಗೋಳ್ತಮಜಲು ಅಬೂಬಕರ್ ಹಾಜಿ ಅವರು ಪವಿತ್ರ ಮಕ್ಕಾಕೆ ಹಜ್ ಗೆ ತೆರಳಿ ಮರಳುವಾಗ ‘ಹಜಾಜ್’ ಹೆಸರಿನಲ್ಲಿ ಜೊತೆಯಾಗಿ ಉದ್ಯಮ ಪ್ರಾರಂಭಿಸುವ ಸಂಕಲ್ಪ ತೊಟ್ಟರು. ಅದರಂತೆಯೇ 1970 ರಲ್ಲಿ ಹಜಾಜ್ ಬೀಡಿ ಉದ್ಯಮ ಪ್ರಾರಂಭಿಸಿದರು. ಅದು ಕರ್ನಾಟಕ ಮತ್ತು ಕೇರಳ ರಾಜ್ಯಾದ್ಯಂತ ಪ್ರಸಿದ್ಧಿ ಪಡೆಯಿತು. ನಂತರದ ದಿನಗಳಲ್ಲಿ ಹಜಾಜ್ ಬಾರ್ ಸೋಪ್, ಹಜಾಜ್ ಪ್ಲಾಸ್ಟಿಕ್ಸ್ ನ್ನು ಪ್ರಾರಂಭಿಸಿ ಅದರಲ್ಲೂ ಯಶಸ್ವಿಯಾದರು. ಪ್ರಸ್ತುತ ಅವರಿಬ್ಬರು ಸಹೋದರರು ಮತ್ತು ಸಹೋದರರ ಮಕ್ಕಳು ಉದ್ಯಮವನ್ನು ಜಂಟಿಯಾಗಿ ಮುಂದುವರಿಸುತ್ತಿದ್ದಾರೆ.

ಅಬ್ದುಲ್ ಖಾದರ್ ಹಾಜಿ ಅವರು ಜಿಲ್ಲೆಯ ಹಿರಿಯ ಬ್ಯಾರಿ, ಕನ್ನಡ ಸಾಹಿತಿ ಕವಿಯಾಗಿದ್ದಾರೆ. ಅವರ ಹಲವಾರು ಲೇಖನ ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಹೆಸರಲ್ಲಿ ಅಭಿನಂದನಾ ಗ್ರಂಥವೊಂದು ಬಿಡುಗಡೆಯಾಗಿದೆ. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ದುಡಿದಿದ್ದಾರೆ. ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದಲೂ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಶ್ರೀಯುತರು ಹಜಾಜ್ ಉದ್ಯಮದ ಜೊತೆಗೆ ಸಾಮಾಜಿಕವಾಗಿಯೂ ತೊಡಗಿಸಿಕೊಂಡು ಬಡ/ಅಶಕ್ತರ ಶ್ರೇಯೋಭಿವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಕಲ್ಲಡ್ಕ ಜುಮಾ ಮಸೀದಿ ಹಾಗೂ ಗೋಳ್ತಮಜಲು ಜುಮಾ ಮಸೀದಿಯ ಅಭಿವೃದ್ಧಿಗೂ ವಿಶೇಷ ಕೊಡುಗೆ ನೀಡಿದ್ದಾರೆ. ಹಜಾಜ್ ಸಂಸ್ಥೆ ಮೂಲಕ ಫ್ಯಾಮಿಲಿ ಟ್ರಸ್ಟ್ ರಚಿಸಿ “ಜೆಮ್ ಪಬ್ಲಿಕ್ ಸ್ಕೂಲ್” ಸ್ಥಾಪಿಸಿ ನಾಡಿನ ಸಾವಿರಾರು ಮಕ್ಕಳಿಗೆ ವಿಧ್ಯೆ ಒದಗಿಸುತ್ತಿದ್ದರು. ಗೋಳ್ತಮಜಲಿನಲ್ಲಿ ಸರಕಾರಿ ಪ್ರೌಢಶಾಲೆ ಪ್ರಾರಂಭಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಜಾತಿ ಧರ್ಮವಿಲ್ಲದೆ ನಾಡಿನ ಯುವಕರನ್ನು ಒಗ್ಗೂಡಿಸಿ ಹಜಾಜ್ ಸ್ಪೋರ್ಟ್ಸ್ ಕ್ಲಬ್ ಮೂಲಕ ಉಭಯ ರಾಜ್ಯಾದ್ಯಂತ ಕಬಡ್ಡಿ ಪಂದ್ಯಾಟದಲ್ಲಿ ಹಜಾಜ್ ಸ್ಪೋರ್ಟ್ಸ್ ಕ್ಲಬ್ ಖ್ಯಾತಿ ಪಡೆದಿದೆ. ನಾಡಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿ ಕರಾವಳಿ ಜಿಲ್ಲಾದ್ಯಂತ ಹೆಸರುವಾಸಿಯಾಗಿದ್ದರು.

ಅವರು ಪತ್ನಿ, ಪುತ್ರರಾದ ಸಮಸ್ತ ನೇತಾರರಾದ ಅಹ್ಮದ್ ಯೂಸುಫ್ ಹಾಜಿ, ಹಿದಾಯ ಫೌಂಡೇಶನ್ ಹಾಗೂ ಎಂ.ಫ್ರೆಂಡ್ಸ್ ಸಂಸ್ಥೆ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಜಿ, ಬ್ಯಾರಿ ಚೇಂಬರ್ಸ್ ನಲ್ಲಿ ಸಕ್ರಿಯರಾದ ಅಬ್ದುಲ್ ರಝಾಕ್ ಹಾಜಿ, ಬಂಟ್ವಾಳ ರೋಟರಿ ಸಂಸ್ಥೆಯ ಪೂರ್ವಾಧ್ಯಕ್ಷರು, ಹೈನು ಕೃಷಿಕರಾದ ಅಹ್ಮದ್ ಮುಸ್ತಫಾ, ಹಜಾಜ್ ಸ್ಪೋರ್ಟ್ಸ್ ಕ್ಲಬ್ ನಲ್ಲಿರುವ ಮಹಮ್ಮದ್ ಶರೀಫ್ ಹಾಗೂ ಅಲ್ತಾಫ್ ಸೇರಿದಂತೆ ಆರು ಗಂಡು, ಐದು ಹೆಣ್ಮಕ್ಕಳನ್ನು ಅಗಲಿದ್ದಾರೆ.

ಅಸರ್ ನಮಾಝ್ ಗೆ ಅಂತ್ಯಸಂಸ್ಕಾರ

ಇದೀಗಾಗಲೇ ಮಂಗಳೂರು ಖಾಸಗಿ ಆಸ್ಪತ್ರೆಯಿಂದ ಗೋಳ್ತಮಜಲಿನ ಮನೆಗೆ ಮೃತದೇಹ ತರಲಾಗಿದೆ. ಪ್ರಸ್ತುತ ಸಾರ್ವಜನಿಕರು ಹರಿದು ಬರಲು ಪ್ರಾರಂಭಿಸಿದ್ದಾರೆ. ಸಂಜೆ 04:00 ಗಂಟೆಗೆ ಮೃತದೇಹದ ಅಂತ್ಯಸಂಸ್ಕಾರ ನಡೆಯಲಿದ್ದು, ಸಂಜೆ 05:00 ಗಂಟೆಗೆ ಕಲ್ಲಡ್ಕ ಜುಮಾ ಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here