Thursday, October 19, 2023

ಶ್ರೀರಾಮ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ದೀಪಪ್ರದಾನ ಕಾರ್ಯಕ್ರಮ

Must read

ಬಂಟ್ವಾಳ: ಜೀವನದಲ್ಲಿ ಎಲ್ಲೂ ಕೂಡ ಕೊನೆ ಅನ್ನುವುದಿಲ್ಲ. ಕಾಲೇಜು ರಂಗದಿಂದ ಜೀವನ ರಂಗಕ್ಕೆ ಪ್ರವೇಶಿಸುತ್ತಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳನ್ನು ಸಮಸ್ಯೆಗಳನ್ನು ಗುರು ಹಿರಿಯರ ಮಾರ್ಗದರ್ಶನದೊಂದಿಗೆ ಪರಿಹರಿಸಿದರೆ, ಜೀವನ ರಂಗದಲ್ಲಿ ಸ್ವತಃ ಬಗೆಹರಿಸಿಕೊಳ್ಳಬೇಕು. ಇದಕ್ಕೆ ಪೂರಕವಾದ ಆತ್ಮಸ್ಥೈರ್ಯ ವಿದ್ಯಾರ್ಥಿ ಜೀವನದಲ್ಲೇ ಗಳಿಸಿಕೊಳ್ಳಬೇಕು ಎಂದು ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಮಹಾಬಲೇಶ್ವರ ಎಂ. ಎಸ್. ನುಡಿದರು.
ಅವರು ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ 2018-19ನೇ ಸಾಲಿನ ದೀಪಪ್ರದಾನ ಕಾರ್ಯಕ್ರಮದಲ್ಲಿ ಪದವಿ ವಿಭಾಗದ 8ನೇ ತಂಡದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾಥಿಗಳು ದೀಪ ಪಡೆಯುವುದರ ಮೂಲಕ ತಮ್ಮ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಒಂದು ಸುಂದರವಾದ ಹಾಗೂ ಭಾವನಾತ್ಮಕ ಕಾರ್ಯಕ್ರಮ ಇದಾಗಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ದೀಪವು ಜ್ಞಾನ, ತಿಳುವಳಿಕೆ ಹಾಗೂ ಕತ್ತಲಲ್ಲಿ ಬೆಳಕು ಕೊಡುವ ಸಂಕೇತ. ಸಮಾಜದಲ್ಲಿ ಅನೇಕ ಜೀವನ ಪರೀಕ್ಷೆಯನ್ನು ಎದುರಿಸುವ ನಮಗೆ ಸುಸಂಸ್ಕೃತ ಸಂಪ್ರದಾಯ ಪದ್ಧತಿಯ ಅವಶ್ಯಕತೆಯಿದ್ದು ಇಂತಹ ಜೀವನ ಶೈಲಿಯನ್ನು ಕಲಿತುಕೊಂಡಾಗ ಮಾತ್ರ ಸಮಾಜದಲ್ಲಿರುವ ಕತ್ತಲನ್ನು ಕೂಡಾ ಹೋಗಲಾಡಿಸಲು ಸಾಧ್ಯ. ಜಗತ್ತಿನ ಯಾವುದೇ ಮೂಲೆಗೂ ಹೋದರೂ ಎಲ್ಲರಿಗೂ ಒಳ್ಳೆಯದನ್ನೇ ಮಾಡುವ ಮನೋಭಾವ ಹೊಂದಿರುವ ಭಾರತೀಯರ ಹೆಜ್ಜೆ ಗುರುತೇ ಇಂತಹ ಸಕಾರಾತ್ಮಕ ಭಾವನೆಯೇ ನಮ್ಮ ರಕ್ತದಲ್ಲಿಯೇ ಸೇರಿಕೊಂಡಿದೆ. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡುವ ಪ್ರಯತ್ನ ಮಾಡುತ್ತಾ ಬಂದಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಎನ್. ಐ.ಟಿ.ಕೆ. ಸುರತ್ಕಲ್‌ನ ಆಡಳಿತ ನಿರ್ದೇಶಕ ಡಾ| ಕೆ. ಬಲವೀರ ರೆಡ್ಡಿ, ಚೆನ್ನೈನ ವಿಕ್ರಾಂತ್ ಕೆಮಿಕಲ್ ಕಾರ್ಪೋರೇಶನ್ ಪ್ರೈ. ಲಿ. ಆಡಳಿತ ನಿರ್ದೇಶಕ ಬಿ. ಜಿ. ಕಾರಂತ್, ಕರ್ನಾಟಕ ರಾಜ್ಯ ಸಾವಿತ್ರಿ ಭಾಯಿಪುಲೆ ಶಿಕ್ಷಕಿಯರ ಸಂಘ ಧಾರಾವಾಡದ ರಾಜ್ಯಾಧ್ಯಕ್ಷ  ಲತಾ ಮುಳ್ಳೂರು ಆಗಮಿಸಿದ್ದರು.
ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ರಾಷ್ಟ್ರ ಸೇವಿಕಾ ಸಮಿತಿ ಪ್ರಾಂತ ಕಾರ್‍ಯಕಾರಿಣಿ ಸದಸ್ಯೆ ಕಮಲಾ ಪ್ರಭಾಕರ ಭಟ್, ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕ ರಮೇಶ್ ಎನ್. ಗೌರವ ಉಪಸ್ಥಿತರಿದ್ದರು.

ಅಂತಿಮ ವರ್ಷದ ವಿದ್ಯಾರ್ಥಿಗಳು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ದೀಪವನ್ನು ಹಸ್ತಾಂತರಿಸಿ ತಮ್ಮ ಮೂರು ವರ್ಷಗಳ ವಿದ್ಯಾರ್ಥಿ ಜೀವನದ ನೋವು – ನಲಿವುಗಳನ್ನು ಹಂಚಿಕೊಂಡರು. ಹಾಗೆಯೇ ಅವರ ಸವಿ ನೆನಪಿಗಾಗಿ ಕಾಲೇಜಿಗೆ ಕೊಡುಗೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ರಾಮಧ್ವನಿ ಬಿಡುಗಡೆಗೊಳಿಸಲಾಯಿತು. ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಸ್ವಾಗತಿಸಿ, ವಿದ್ಯಾರ್ಥಿಗಳಾದ ವರ್ಷಿಣಿ ವಂದಿಸಿ, ಭವಾನಿ, ಸುಭಾಷಿಣಿ ಕಾರ್ಯಕ್ರಮ ನಿರೂಪಿಸಿದರು.

More articles

Latest article