

ಊರಲ್ಲದ ಊರಿಗೆ
ದಾರಿ ತಪ್ಪಿ ಸೇರಬೇಕು.
ಆ ಊರು ಹೇಗಿರಬೇಕು
ಗೊತ್ತೆ…!?
ನೆಟ್ವರ್ಕ್ ನ ಅರಿವಿರಬಾರದು
ಗಂಟೆಗೊಮ್ಮೆ ರಿಂಗಾಗುವ
ನೂರಾರು ಮೆಸೇಜ್ ಬರುವ
ದಿನಕ್ಕೆ ಹತ್ತಾರು ಬಾರಿ ನೋಡುವ
ಜಗತ್ತೆ ಅಂಗೈಯೊಳಗಿರಿಸುವ
ಮೊಬೈಲ್ ಇರದೇ
ಬಾರದಲ್ಲಿ
ಹಾರುವ ವಿಮಾನ
ವೇಗದ ವಾಹನ
ಹಳಿಯಲ್ಲಿ ಹೋಗುವ ರೈಲು
ನೀರಲ್ಲಿ ಹೋಗುವ ಬೋಟು
ಯಾವುದಿರಬಾರದು
ತನ್ನ ಊರಿನ ವಿಶಾಲ ವ್ಯಾಪ್ತಿಯೇ
ಮುಕ್ತಾಯ ಎಂದೆನಿಸಬೇಕು.
ತನ್ನ ಕಾಲಿನ ವೇಗವೇ ಕೊನೆಯಾಗಿರಬೇಕು
ಟಿವಿ ಎಂದರೇನು
ಕಂಪ್ಯೂಟರ್,
ಈ ರೇಡಿಯೋ, ಸಿ.ಡಿ,ಡಿವಿಡಿ,
ಎಂದರೆ ಗೊತ್ತೇ ಇರಬಾರದು
ಫ್ಯಾನ್ ,ಫ್ರಿಜ್,ಎ.ಸಿ ಹೆಸರೆ ಗೊತ್ತಿರಬಾರದು.
ಹಣದ ಮೌಲ್ಯ, ಕಾಂಕ್ರೀಟ್ ಕಟ್ಟಡ
ಮಾಲ್,ಬಜಾರ್
ಯಾವುದು ತಿಳಿದಿರಬಾರದು..!
ಹೂ ಕೊಟ್ಟು ಹಣ್ಣು ತೊಗೋಬೇಕು
ತರಕಾರಿ ಕೊಟ್ಟು ಅಕ್ಕಿ ಪಡೆಯಬೇಕು
ಈ ಸಂತೃಪ್ತಿಯ ವಿನಿಮಯವೇ
ವ್ಯಾಪಾರ ಆಗಿರಬೇಕು!.
ಹೌದು ಆ ಹಿಂದಿನ ಕಾಡು ಜನರ ಹಾಗೆ.!
ಆದರೆ ಪರಿವರ್ತನೆ ಹೊಂದಬಾರದು..!!
ಆ ಊರಿಗೆ ಭಾಷೆ, ಅಕ್ಷರ
ಯಾವುದು ಇರಬಾರದು
ಜಾತಿಯೂ ಇರಬಾರದು
ಧರ್ಮ ದ ಹೆಸರಲಿ ಜಗಳವೂ ಆಗಬಾರದು
ಒಬ್ಬರಿಗೊಬ್ಬರು ಕಣ್ಣಲ್ಲೇ ಮಾತಾಡಬೇಕು
ಸುಖ-ದುಃಖದ ಅರಿಬಾಗಬೇಕು
ಒಬ್ಬರಿಗೊಬ್ಬರು ಸಹಾಯ ಮಾಡಿ
ಬದುಕುವುದೇ ಧರ್ಮವಾಗಬೇಕು.!
ಆ ಊರಿಗೆ ದಾರಿ ತಪ್ಪಿಹೋದ
ನನ್ನ ಅವರೊಳಗಾಗಿಸಬೇಕು
ಕಣ್ಣಲ್ಲೇ ನನ್ನ ಅಸಹಾಯಕತೆ ಅರಿವಾಗಬೇಕು
ಆ ಕಣ್ಣ ಭಾಷೆ ಕಲಿಸಿ ಕೊಡಬೇಕು..!
ಒಟ್ಟಾರೆ ಸಾವೊಂದೆ ಸತ್ಯ
ಮಿಕ್ಕವೆಲ್ಲ ಮಿಥ್ಯ
ಅರಿವಾಗಬೇಕು..!!
ಅಂತಹ ಊರಿಗೆ
ದಾರಿತಪ್ಪಿಯಾದರೂ
ಸೇರಬಾರದೇ…!
✍ಯತೀಶ್ ಕಾಮಾಜೆ








