ಬಂಟ್ವಾಳ: ಮಂಗಳೂರು ಸಂಸದ ನಳಿನ್ ಕುಮಾರ್ ಅವರ ಆಡಳಿತ ವೈಫಲ್ಯವೇ ಈ ಬಾರಿ ಬಿಜೆಪಿಗೆ ಸೋಲಿನ ಆಘಾತವನ್ನು ಕೊಡಲಿದೆ ಎಂದು ಹಿರಿಯ ನ್ಯಾಯವಾದಿ, ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ಅವರು ಆರೋಪ ಮಾಡಿದರು.


ಬಂಟ್ವಾಳ ಪುರಸಭಾ ವ್ಯಾಪ್ತಿಯ ಶಾಂತಿಯಂಗಡಿ ಪರಿಸರದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಮತಯಾಚನೆ ಪಾದಾಯಾತ್ರೆ ಕೈಗೊಂಡು ಮಾತನಾಡಿದ ಅವರು, ನಳಿನ್ ಎರಡು ಅವಧಿ ಸಂಸದನಾದರೂ, ಮಂಗಳೂರು ನಗರವನ್ನು ಅಭಿವೃದ್ಧಿ ಮಾಡಿಸುವಲ್ಲಿ ಸಂಪೂರ್ಣ ಸೋಲು ಕಂಡಿದ್ದಾರೆ ಎಂದು ಟೀಕಿಸಿದರು.
ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳು ನಡೆಯಬೇಕಿದೆ. ಈ ನಿಟ್ಟಿನಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನ ಏನು ಸಾಲದು ಎಂದವರು, ಮಿಥುನ್ ರೈ ಓರ್ವ ಸಮರ್ಥ, ಯುವ ಹಾಗೂ ಸೃಜನಶೀಲ ವ್ಯಕ್ತಿತ್ವ ಹೊಂದಿರುವ ಅಭ್ಯರ್ಥಿಯಾಗಿದ್ದು, ಜನರ ಒಲುವು ಮಿಥುನ್ ರೈ ಪರವಾಗಿದೆ ಎಂದವರು ಭರವಸೆ ನುಡಿದರು.
ಮೋದಿಯಿಂದ ಆರ್ಥಿಕ ಬಿಕ್ಕಟ್ಟು!
ಮೋದಿ ಪ್ರಧಾನಿಯಾಗ ಬಳಿಕ ದೇಶದಲ್ಲಿ ಸಂಪೂರ್ಣ ಆರ್ಥಿಕ ಸಂಕಷ್ಟ ಎದುರಾಗಿದೆ. ಜನರು ನಿತ್ಯವೂ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಬೆಲೆ ಏರಿಕೆಯಿಂದಾಗಿ ಬಡವರು, ಸಾಮಾನ್ಯ ವರ್ಗದವರ ದೈನಂದಿನ ಖರ್ಚು ನಿರ್ವಹಣೆಗಾಗಿ ಸಾಕಷ್ಟು ಕಷ್ಟವಾಗುತ್ತಿದೆ. ಈ ದೇಶವನ್ನು ಉಸಿರುಗಟ್ಟಿದ ವಾತಾವರಣದಿಂದ ಮುಕ್ತಗೊಳಿಸಲು ಜನತೆ ಮೋದಿಯವರನ್ನು ತಿರಸ್ಕರಿಸಲಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಶಾಂತಿಯಂಗಡಿ, ಪರ್ಲಿಯಾ, ಮಧ್ವ, ತಾಳಿಪಡ್ಪು, ಕೊಡಂಗೆ, ಕೈಕಂಬ ಪರಿಸರದಲ್ಲಿ ಕಾಲ್ನಡಿಗೆ ಜಾಥಾ ನಡೆಸಿದ ಅಶ್ವನಿ ಕುಮಾರ್ ರೈ, ಮಿಥುನ್ ರೈ ಪರ ಮತಯಾಚನೆ ನಡೆಸಿದರು. ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಮಾಜಿ ಅಧ್ಯಕ್ಷ ರಾಮಕೃಷ್ಣ ಆಳ್ವ, ಮಾಜಿ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ಶೆರೀಫ್ ಶಾಂತಿಯಂಗಡಿ, ಲುಕ್ಮಾನ್ ಕೈಕಂಬ, ಇರಾ ಗ್ರಾ.ಪಂ. ಅಧ್ಯಕ್ಷ ರಝಾಕ್ ಕುಕ್ಕಾಜೆ, ಪ್ರಮುಖರಾದ ಅಮೀರ್ ತುಂಬೆ, ಸ್ಟೀವನ್ ಡಿಸೋಜ, ಗೋಪಾಲಕೃಷ್ಣ ತುಂಬೆ, ಮಹಮ್ಮದಾಲಿ ಶಾಂತಿಯಂಗಡಿ, ಅಶ್ರಫ್ ಕೈಕಂಬ ಮೊದಲಾದವರು ಪಾದಾಯಾತ್ರೆಯಲ್ಲ ಪಾಲ್ಗೊಂಡರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here