ಬಂಟ್ವಾಳ: ಕಳೆದ 5 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಸಂಪೂರ್ಣ ವಿಫಲವಾಗಿದೆ. ರೈತರ , ಯುವಕರ, ಈ ದೇಶದ ಭಾವೈಕ್ಯತೆ ಮತ್ತು ಸಾಮರಸ್ಯದ ಕಾವಲುಗಾರನಾಗಬೇಕಾದ ನರೇಂದ್ರ ಮೋದಿಯವರು ಜಾತಿ, ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ಗೊಂದಲ ಸೃಷ್ಠಿಸಿದ್ದಾರೆ. ಮುಖವಿಲ್ಲದ ಬಿಜೆಪಿಗರು ಚುನಾವಣೆ ಸಮೀಪಿಸುತ್ತಿದ್ದಂತೆ ಮೋದಿಯ ವಿಶೇಷ ಮುಖವಾಡ ಧರಿಸಿ ಜನತೆಯನ್ನು ಮರುಳು ಮಾಡುತ್ತಿದ್ದಾರೆ. ಈ ಬಗ್ಗೆ ಮತದಾರರು ಎಚ್ಚರಿಕೆ ವಹಿಸಬೇಕು ಎಂದು ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಅವರು ಹೇಳಿದರು.
ಬಂಟ್ವಾಳ ತಾಲೂಕು ವಾಮದಪದವುನಲ್ಲಿ ಎ.4ರಂದು ಸಂಜೆ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಕಳೆದ 10 ವರ್ಷಗಳಲ್ಲಿ ದ.ಕ.ಜಿಲ್ಲೆಗೆ ಕಾಣುವಂತೆ ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ. ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಬೇಕಾದ ಅವರು ಜಿಲ್ಲೆಗೆ ಬೆಂಕಿ ಹಚ್ಚುವ ಮಾತನಾಡಿ ಗಲಭೆ ಸೃಷ್ಠಿಸುವ ಹುನ್ನಾರ ನಡೆಸಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಿಥುನ್ ರೈ ಅವರು ಮಾತನಾಡಿ, ಕಾಂಗ್ರೆಸ್ ಮತ್ತು ಜಾತ್ಯಾತಿತ ಜನತಾದಳದ ಮುಖಂಡರ ಹಾಗೂ ಜಿಲ್ಲೆಯ ಪಕ್ಷದ ಎಲ್ಲಾ ಹಿರಿಯ ಮುಖಂಡರ, ಕಾರ್ಯಕರ್ತರ ಧ್ವನಿಯಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್‌ನ ವಿಜಯ ಪತಾಕೆ ಹಾರಿಸಬೇಕು ಎಂಬ ಸಂಕಲ್ಪ ಮಾಡಿದ್ದೇನೆ. ಪಕ್ಷದ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು. ಮುಂದಿನ 5 ವರ್ಷ ಜನರ ಹಾಗೂ ಕಾರ್ಯಕರ್ತರ ನೋವು ನಲಿವಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ಇತ್ತರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ಜಿಲ್ಲೆಯ ಸ್ವಾಭಿಮಾನದ ಸಂಕೇತವಾಗಿದ್ದ ವಿಜಯಾ ಬ್ಯಾಂಕ್ ವಿಲೀನೀಕರಣಕ್ಕೆ ಇಲ್ಲಿನ ಸಂಸದರ ವಿಫಲತೆಯೇ ಕಾರಣ ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಕ್ಷ ಪ್ರಮುಖರಾದ ಬಿ.ಎಚ್. ಖಾದರ್, ಕೆ. ಮಾಯಿಲಪ್ಪ ಸಾಲ್ಯಾನ್,ಬಿ. ಪದ್ಮಶೇಖರ ಜೈನ್,ಚಂದ್ರಪ್ರಕಾಶ್ ಶೆಟ್ಟಿ, ಉಸ್ಮಾನ್ ಕರೋಪಾಡಿ, ಜನಾರ್ದನ ಚಂಡ್ತಿಮಾರ್, ಅಮ್ಮು ರೈ ಹರ್ಕಾಡಿ, ಸಂಜೀವ ಪೂಜಾರಿ ಮೆಲ್ಕಾರ್, ಸದಾಶಿವ ಬಂಗೇರ, ಅಬ್ಬಾಸ್ ಆಲಿ, ಪ್ರಶಾಂತ್ ಕುಲಾಲ್, ಮಲ್ಲಿಕಾ ಶೆಟ್ಟಿ, ರತ್ನಾವತಿ ಜೆ. ಶೆಟ್ಟಿ, ಜೆಸಿಂತಾ ಡಿಸೋಜ,ಗಣೇಶ್ ಪೂಜಾರಿ, ಲುಕ್ ಮಾನ್, ಚಿತ್ತರಂಜನ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನವೀನ ಚಂದ್ರ ಶೆಟ್ಟಿ ಸ್ವಾಗತಿಸಿದರು. ಶೌಖತ್ ಆಲಿ ವಂದಿಸಿದರು. ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೆ ಮುನ್ನ ವಾಮದಪದವು ಪೇಟೆಯಲ್ಲಿ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here