ಬೆವರು ಹರಿವ ಬಿರು ಬಿಸಿಲಿನ ಬಿಸಿ ಒಂದೆಡೆಯಾದರೆ ಚುನಾವಣೆಯಲಿ ಏರುತಿರುವ ಕಾವು ಮತ್ತೊಂದೆಡೆ! ಹಲ ಪಕ್ಷಗಳು ಮತದಾರರನ್ನು ತಮ್ಮೆಡೆಗೆ ಸೆಳೆಯಲು ಓಲೈಸಿಕೊಳ್ಳುವ ಪರಿಯಲಿ! ಮತದಾರ ಬುದ್ಧಿವಂತನಾದಲ್ಲಿ ಇನ್ನೈದು ವರುಷ ಆರಾಮವಾಗಿರಬಲ್ಲ! ಆದರೆ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಅವರಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳಿದ್ದೇ ಇರುತ್ತವೆ. ಯಾರು ಬೇಕಾದರೂ ಸ್ವತಂತ್ರ ಭಾರತದ ಪ್ರಧಾನಿಯಾಗಬಹುದು ಅದನ್ನು ಮೊದಲೇ ಯಾರೂ ಊಹಿಸಲು ಸಾಧ್ಯವಿಲ್ಲ. ಒಂದೇ ಪಕ್ಷ ಗೆಲ್ಲಲು ಕಷ್ಟವೆಂದು ಅರಿತಾಗ ಅಲ್ಲಿ ಅಧಿಕಾರದ ಆಸೆಯಿಂದ ಹಲವಾರು ಪಕ್ಷಗಳು ಒಗ್ಗಟ್ಟಾಗಿ ಮೈತ್ರಿ ಮಾಡಿಕೊಳ್ಳುತ್ತವೆ! ಕೆಲವು ಪ್ರಾದೇಶಿಕ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪಕ್ಷಗಳು ಬೆಂಬಲ ಕೊಡುತ್ತವೆ! ಮತ್ತೆ ಕೆಲವು ಅಭ್ಯರ್ಥಿಗಳು ನಾನು ಗೆದ್ದರೆ ಆ ರಾಷ್ಟ್ರೀಯ ಪಕ್ಷಕ್ಕೆ ಸಪೋರ್ಟ್ ಮಾಡುವೆನೆಂದು ಘೋಷಿಸಿಕೊಂಡಿರುತ್ತಾರೆ! ಹೀಗೆಲ್ಲಾ ಒಳಗೊಳಗೇ ಒಪ್ಪಂದಗಳು, ಮಾತುಕತೆಗೆಳು ನಡೆದು, ಬಂಡಾಯ ಅಭ್ಯರ್ಥಿಯನ್ನು ತಂದು ನಿಲ್ಲಿಸುವುದು, ಕೆಲವರು ಮತಗಾರರನ್ನು ತಮ್ಮೆಡೆ ಸೆಳೆಯಲು ಸ್ವತಂತ್ರವಾಗಿ ಸ್ಪರ್ಧಿಸುವುದು, ಮತ್ತೆ ಕೆಲವರು ಹೆಸರಿಗಾಗಿ ಸ್ಪರ್ಧಿಸುವವರೂ ಇದ್ದಾರೆ! ಇನ್ನೂ ಏನೇನೋ ಹಲವು ಕಾರಣಗಳು ಇರಬಹುದು! ಮತದಾರನಿಗೆ ಕನ್ ಫ್ಯೂಸ್ ಮಾಡಲು ಒಂದೇ ಹೆಸರಿನ ಮೂರು ನಾಲ್ಕು ಜನರನ್ನು ನಿಲ್ಲಿಸುವುದು, ಪಕ್ಷೇತರ ಅಭ್ಯರ್ಥಿಯಾಗಿ ನಿಂತು, ಗೆದ್ದ ಬಳಿಕ ಆಡಳಿತ ಪಕ್ಷಕ್ಕೆ ನಿಗಧಿತ ಸಂಖ್ಯೆಯ ಸದಸ್ಯರು ಇರದಿದ್ದ ಪಕ್ಷದಲ್ಲಿ ಡಿಮಾಂಡ್ ಮೇರೆಗೆ ಅವರಿಗೆ ಸಹಾಯ ಮಾಡಲು ಒಪ್ಪುವುದು ಇತ್ಯಾದಿ.
ವಿಶ್ವಾಸ ಮತ ಸಾಬೀತು ಪಡಿಸಲು ಸಾಧ್ಯವಾಗದಿದ್ದರೆ, ಗಳಿಸಲಾಗದಿದ್ದರೆ, ಮೈತ್ರಿ ಸರತಾರದ ಯಾರು ಬೇಕಾದರೂ ಪಟ್ಟ ಸೇರಬಹುದು!
ಯಾರ ಹಣೆಯಲ್ಲಿ ಭಾರತೀಯರ ಮುಂದಿನ ಪ್ರಧಾನಿಯಾಗುವ ಹೆಸರು ಬರೆದಿದೆಯೋ ಅವರಾಗುವರು. ಆದರೆ ಬಲಿಷ್ಟ ಭಾರತವನ್ನು ಕಟ್ಟುವ ಗಟ್ಟಿ ಪ್ರಧಾನಿ ದೇಶಕ್ಕೆ ಸಿಗಲಿ, ದೇಶವನ್ನು ಜಾತಿ ಮತಗಳ ಆಧಾರದಲ್ಲಿ ಓಟಿಗಾಗಿ ವಿಭಾಗಿಸದೆ ಸರ್ವರಿಗೂ ನ್ಯಾಯ ನೀಡಿ, ಸರ್ವ ಜನರನ್ನೂ ಒಂದೇ ದೃಷ್ಟಿಯಲ್ಲಿ ನೋಡುವಂಥವರು ದೇಶದ ಚುಕ್ಕಾಣಿ ಹಿಡಿಯಲಿ. ಬಡ, ಸಾಧಾರಣ ವರ್ಗದ ಜನರ ಬದುಕು ಸಹನೀಯವಾಗದಿರಲಿ, ಬೆಲೆಯೇರಿಕೆ, ಭೂಮಿಯ ತಾಪ ತಗ್ಗಲಿ. ಹಿತಮಿತವಾದ ಮಳೆಯೂ ಬರುವಂತಾಗಲಿ, ನಮ್ಮ ದೇಶವನ್ನು ನೋಡಿ ಇತರ ದೇಶದ ಜನ ದೇಶ ಎಂದರೆ ಹೀಗಿರಬೇಕು, ಪ್ರಧಾನಿ, ಮಂತ್ರಿಗಳೆಂದರೆ ಹಾಗಿರಬೇಕು ಎಂದು ಹೆಮ್ಮೆಯಿಂದ ಮಾತನಾಡಿಕೊಳ್ಳುವಂಥ ಸದೃಢ ನಾಯಕ ನಮ್ಮ ದೇಶಕ್ಕೆ ಆರಿಸಿ ಬರಲಿ, ಪಕ್ಷಕ್ಕಿಂತಲೂ ಮಾನವತೆ ದೊಡ್ಡದಾಗಿ ಶಾಂತಿ, ಸಹನೆ ದೇಶದಲ್ಲಿ ನೆಲೆಸಲಿ ಎಂದು ಶುಭಹಾರೈಸೋಣ. ನೀವೇನಂತೀರಿ?

 

@ಪ್ರೇಮ್@

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here