ಮಾರ್ಚ್ ತಿಂಗಳು ಬಂತೆಂದರೆ ಪರೀಕ್ಷಾ ಸುಗ್ಗಿ. ಪ್ರತಿ ಮಗುವಿಗೂ ಪೋಷಕರಿಂದ ಓದು, ಕಲಿ, ಬರೆ ಎಂಬ ಒತ್ತಡ. ಮಕ್ಕಳು ಚೆನ್ನಾಗಿ ಕಲಿಯಬೇಕು, ಉತ್ತಮ ಅಂಕಗಳನ್ನು ಪಡೆಯಬೇಕೆಂಬ ಆಸೆ ಶಿಕ್ಷಕರಿಗೆ ಮಾತ್ರವಲ್ಲ, ಪೋಷಕರಿಗೂ ಕೂಡಾ. ಆದರೆ ಸಣ್ಣ ಪುಟ್ಟ ತರಗತಿಗಳ ಮಕ್ಕಳಿಗೆ ತೀರಾ ಈ ರೀತಿ ಒತ್ತಡ ಹೇರುವುದು ಸರಿಯಲ್ಲ. ಕೆಲವು ವಿದ್ಯಾರ್ಥಿಗಳು ತಮ್ಮ ಪೋಷಕರನ್ನು ಸಂತಸಗೊಳಿಸಲು ಕಷ್ಟಪಟ್ಟು, ನಿದ್ದೆಗೆಟ್ಟು ಆರೋಗ್ಯ ಹಾಳು ಮಾಡಿಕೊಂಡರೆ, ಮತ್ತೆ ಕೆಲವರು ಪೋಷಕರ ಮರ್ಯಾದೆ ಉಳಿಸಲಿಕ್ಕಾಗಿ ತಮ್ಮ ಜೀವನವನ್ನೇ ಬಲಿ ಕೊಡುತ್ತಾರೆ.
ಇದೆಲ್ಲ ನೋಡುವಾಗ ತುಂಬಾ ಬೇಸರವಾಗುತ್ತದೆ. ಕೇವಲ ಒಂದು ತರಗತಿ ಜೀವನದ ಒಂದು ಮೆಟ್ಟಿಲು ಅಷ್ಟೆ! ಅದನ್ನು ದಾಟಲಾಗದಿದ್ದರೂ ಜಂಪ್ ಮಾಡಿ ಬದುಕುವಂತಹ ಹಲವಾರು ದಾರಿಗಳಿವೆ ಬದುಕಲು!
ದೇವರು ಪ್ರತಿಯೊಬ್ಬ ಮನುಜನ ಮೆದುಳೊಳಗೆ ಹಲವಾರು ಶಕ್ತಿಗಳನ್ನಿರಿಸಿದ್ದಾನೆ.ಅದು ಅಕ್ಷರಾಭ್ಯಾಸವೇ ಆಗಬೇಕೆಂದಿಲ್ಲ,ತಂಚ್ರಜ್ಞಾನ, ವಿಜ್ಞಾನ, ಆಟೋಟ, ದೇಹ ದಾಢ್ಯತೆ ಇತ್ಯಾದಿ. ಸಾರಾ ಅಬೂಬಕ್ಕರ್ ಅಂತಹ ಮಹಾನ್ ಲೇಖಕಿ ಅವಕಾಶ ಸಿಗದೆ ಕಲಿತದ್ದು ತೀರಾ ಕಡಿಮೆ. ಆದರೂ ಅವರು ಹೆಸರು ಮಾಡಲಿಲ್ಲವೇ?
ಡಾ. ರಾಜ್ ಕುಮಾರ್ ನಟನೆ, ಕಾಯನ, ಯೋಗ ಯಾವುದರಲ್ಲಿ ಕಡಿಮೆ ಇದ್ದರು? ಸಚಿನ್ ತೆಂಡೂಲ್ಕರ್, ನಟ ದರ್ಶನ್, ಹಲವಾರು ವಿಜ್ಞಾನಿಗಳು ನಮ್ಮ ಕಣ್ಣ ಮುಂದೆ ಪ್ರತ್ಯಕ್ಷ ಸಾಕ್ಷಿಗಳಾಗಿ ನಿಂತು ಜೀವನವನ್ನು ಪಾವನಗೊಳಿಸಿರುವರು. ಆದರೆ ಅಕ್ಷರಾಭ್ಯಾಸ ನಾವು ಎಲ್ಲರನ್ನು ತಲುಪಬೇಕಾದ ಮಾಧ್ಯಮ ಹಾಗೂ ಪದವಿ, ಕಲಿಕೆಗಳು ಅದರ ಅಳತೆಗೋಲು. ಅದಕ್ಕಾಗಿ ನಾವು ಒಂದಿಷ್ಟು ಕಲಿಯಬೇಕು. ಪ್ರಜೆಗಳು ವಿದ್ಯಾವಂತರೂ, ಪ್ರಜ್ಞಾವಂತರೂ ಆದರೆ ದೇಶದ ಪ್ರಗತಿ ಸಾಧ್ಯ.
ಪ್ರಜ್ಞೆ ಹುಟ್ಟಬೇಕಾದ್ದು ಶಾಲೆ, ಕಾಲೇಜು ಮತ್ತು ಮನೆಗಳಲ್ಲಿ. ಮನೆಯ ಹಿರಿಯ ಸದಸ್ಯರ ಗುಣ, ನಡವಳಿಕೆಗಳು ಮಕ್ಕಳ ಬದುಕು, ಗುಣಗಳ, ಆತ್ಮವಿಶ್ವಾಸಗಳ ಮೇಲೆ ಪ್ರಭಾವ ಬೀರುತ್ತವೆ. ಮಕ್ಕಳು ಕಲಿಯಬೇಕೆಂದು ತಾನೂ ಐದು ಗಂಟೆಗೇ ಎದ್ದು ಹುರಿದುಂಬಿಸುವ ಪೋಷಕರ ಮಕ್ಕಳು ಧೈರ್ಯದಿ ಕಲಿತರೆ, ತಾವೇ ಏಳು ಗಂಟೆಗೆ ಏಳುವ ಪೋಷಕರ ಮಕ್ಕಳು ಹೇಗೆ ತಾನೇ ಮೊದಲು ಎದ್ದು ಓದಿಯಾರು?
ತಾನು ಜೋರಾಗಿ ಟಿವಿ ಹಾಕಿ ಧಾರೆಯಾಗಿ ಬರುವ ಧಾರಾವಾಹಿಗಳ ನೋಡುತ್ತಾ ಕಾಲ ಕಳೆವ ಮಹಿಳೆಯ ಮಗು ತಾನು ಬೇರೆ ಕೋಣೆಯಲ್ಲಿ ಕುಳಿತು ಗಮನವಿಟ್ಟು ಓದಿಕೊಂಡೀತೇ ?
ಮನೆಗೆ ಬಾಟಲಿ ತಂದು ಮಕ್ಕಳ ಬಳಿಯೇ ಸೋಡಾ, ಹುರಿದ ಕಡ್ಲೆಕಾಯಿ ತರಿಸಿ, ಅವರೆದುರೇ ಕುಡಿದು ಉಳಿದ ಕಡ್ಲೆಯನ್ನು ಅವರಿಗೆ ಕೊಟ್ಟು ಗಲಾಟೆ ಪ್ರಾರಂಭಿಸಿ ಗುದ್ದಾಟ, ಹೊಡೆದಾಟ, ಅರಚಾಟ, ಕೋಪಿಷ್ಟನಾದ ತಂದೆಯನ್ನು ನೋಡಿ ಬೆಳೆವ ಮಕ್ಕಳ ಪರಿಸ್ಥಿತಿ ಒಂದೆಡೆಯಾದರೆ, ಸಂಜೆಯಾಗುತ್ತಲೇ ಅಪ್ಪ ಅಮ್ಮ ಇಬ್ಬರೂ ಕುಡಿದು ಪಾನಮತ್ತರಾಗಿ ಯಾವುದೋ ಲೋಕದಲ್ಲಿ ತೇಲಾಡುತ್ತಿರುವ ಪೋಷಕರ ಮಕ್ಕಳು, ತಮ್ಮ ಕೆಟ್ಟ ಕಾರ್ಯಗಳಿಗೆ ಮಕ್ಕಳು ಅಡ್ಡಿಯಾಗಬಾರದೆಂದು ಅವರನ್ನು ಯಾವುದೋ ನೆಪ ಹೇಳಿ ದೂರದ ಬಂಧುಗಳ ಮನೆಯಲ್ಲೋ, ಆಶ್ರಮಗಳಲ್ಲೋ ಬಿಟ್ಟು ಹಾಯಾಗಿರುವ ಪೋಷಕರ ಪ್ರೀತಿಗೆ ಹಂಬಲಿಸುವ ಮಕ್ಕಳು, ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಅಮ್ಮನನ್ನು ಬಿಟ್ಟು ಹೋದ ಅಪ್ಪನೆಂಬವನು ಪ್ರಾಣಿ ಎಂದುಕೊಂಡು ಅವನ ಮೇಲೆ ರೋಷ ಇರಿಸಿಕೊಂಡ ವಿದ್ಯಾರ್ಥಿಗಳು, ಪರೀಕ್ಷೆ ಸಮಯದಲ್ಲೆ ತಮ್ಮ ಗೃಹ ಪ್ರವೇಶ, ಮನೆ ಮದುವೆ, ಕೋಲ ಇರಿಸಿಕೊಳ್ಳುವ ಪೋಷಕರ ಮನೆಯಿಂದ ಬರುವ ವಿದ್ಯಾರ್ಥಿಗಳು, ತಂದೆಯೋ, ತಾಯಿಯೋ ತೀರಾ ಅನಾರೋಗ್ಯಕ್ಕೀಡಾಗಿ ಅವರನ್ನು ನೋಡಿಕೊಳ್ಳುತ್ತಾ ಆಸ್ಪತ್ರೆಯಲ್ಲೆ ಇದ್ದು ಅಲ್ಲಿಂದ ಬಂದು ಪರೀಕ್ಷೆ ಬರೆವ ಪರಿಸ್ಥಿತಿ, ತಾವೇ ಅನೇಕ ನೋವಿನಿಂದ ಬಳಲುತ್ತಿದ್ದು, ಅದರ ನಡುವೆ ಕಲಿವ ವಿದ್ಯಾರ್ಥಿಗಳು ಹೀಗೆ ಹಲವಾರು ಮನಸ್ಥಿತಿ ಇರುವ ಮಕ್ಕಳನ್ನು ಶಿಕ್ಷಕರು ತಯಾರುಗೊಳಿಸಬೇಕಿದೆ. ಇವರೆಲ್ಲರಲ್ಲೂ ನಾವು ಮೊದಲ ಸ್ಥಾನ, ತೊಂಬತ್ತು ಶೇಕಡಾಕ್ಕಿಂತ ಮೇಲೆ ಅಂಕಗಳನ್ನು ಪಡೆ ಎಂಬ ಒತ್ತಡ ಹಾಕಬಹುದೇ? ಉತ್ತೀರ್ಣತೆಯ ಕನಿಷ್ಟ ಅಂಕಗಳನ್ನು ಪಡೆಯಲು ಹಗಲು ರಾತ್ರಿ ಒದ್ದಾಡುವ ಮಕ್ಕಳಿರುವಾಗ ಇಲಾಖೆ ನಮ್ಮನ್ನು ಅವರು ಗಳಿಸಿದ ಎಲ್ಲಾ ಅಂಕಗಳನ್ನು ಕೂಡಿಸಿ, ಅದರ ಸರಾಸರಿ ತೆಗೆದು, ಅವುಗಳ ಮೇಲೆ ಶಿಕ್ಷಕರಿಗೆ ಉತ್ತಮ, ಅತ್ಯುತ್ತಮ, ಸಾಧಾರಣ ಎಂಬ ಸರ್ಟಿಫಿಕೇಟ್ ನೀಡುತ್ತದೆ! ಇದು ಎಷ್ಟರ ಮಟ್ಟಿಗೆ ಸರಿಯೋ ನಾ ಕಾಣೆ.
ಅಂಕಗಳು ಬೇಕು. ಆದರೆ ಕಡಿಮೆಯಾದ ಒಂದೆರಡು ಅಂಕಗಳು ಬಾಳಿಗೆ ಮುಳುವಾಗಬಾರದು. ಕಠಿಣ ಪರಿಶ್ರಮವೂ ಬದುಕಲ್ಲಿ ಇರಬೇಕು. ಅದು ವ್ಯರ್ಥವಾಗದು. ಅಂತೆಯೇ ಬಂದ ಕಡಿಮೆ ಅಂಕದಿಂದಾಗಿ ಸಾಯಬೇಕೆಂದಿಲ್ಲ, ಮತ್ತೊಮ್ಮೆ, ಮಗದೊಮ್ಮೆ ಪರೀಕ್ಷೆ ಬರೆಯುವ ಅವಕಾಶದೊಂದಿಗೆ, ಹಲವಾರು ದಾರಿಗಳು ಜೀವನ ನಡೆಸಲು ಕಾದಿವೆ. ಪೋಷಕರು ಮಕ್ಕಳ ಮನಸ್ಸಿಗೆ ತೀರಾ ಒತ್ತಡ ಹಾಕದೆ ವಿದ್ಯಾರ್ಥಿಗಳು ಇಷ್ಟಪಡುವ, ಸಾಧಿಸಬಲ್ಲರು ಎನ್ನುವ ಯಾವುದೇ ವಿಭಾಗದಲ್ಲಿ ಅವರ ಆಸಕ್ತಿಗನುಗುಣವಾಗಿ ಪ್ರೋತ್ಸಾಹ ಕೊಟ್ಟು,ಮುಂದುವರೆಸಿದ್ದೇ ಆದರೆ ಯಾವ ಮಗುವು ಹಿಂದೆ ಬೀಳದೆ ತಾನು ಆರಿಸಿಕೊಂಡ ಕ್ಷೇತ್ರದಲ್ಲಿ ಮುಂದುವರೆದು ಉನ್ನತ ಜೀವನ ನಡೆಸುವಲ್ಲಿ ಎರಡು ಮಾತಿಲ್ಲ.
ಪೋಷಕರೇ ನಿಮ್ಮ ಒತ್ತಡವನ್ನು ಮಕ್ಕಳ ಮೇಲೆ ಕುಕ್ಕದಿರಿ. ಅವರ ಆಸೆಯ ಕ್ಷೇತ್ರಗಳಲ್ಲಿ ಓದಲು, ಕೆಲಸ ಮಾಡಲು ಅವಕಾಶ ಕೊಟ್ಟು ಅವರಿಗಿರುವ ಆಸಕ್ತಿಗೆ ನೀರು, ಗೊಬ್ಬರ ಹಾಕಿ. ಪ್ರತಿ ರಜೆಯಲ್ಲೂ ಅವರು ಜೀವನಕ್ಕೆ ಬೇಕಾದ ಹೊಸ ಅನುಭವ ಕಲಿಯಲಿ. ಅವರನ್ನು ಪರೀಕ್ಷೆಗೆ ಮಾನಸಿಕವಾಗಿ ಹುರಿದುಂಬಿಸಿ. ಧೈರ್ಯ ಕೊಡಿ. ಎಷ್ಟೇ ಅಂಕಗಳು ಬಂದರೂ ಇರುವ ಹೊಸ ಹೊಸ ದಾರಿಗಳ ಬಗ್ಗೆ ತಿಳಿಸಿ. ಒತ್ತಡ ರಹಿತ ಸಂತಸದ ಕಲಿಕೆಯ ವಾತಾವರಣ ನಿರ್ಮಿಸಿ. ಅವರು ನಿಮ್ಮ ಉತ್ತಮ ಮನೋಬಲ, ಮನೋಸ್ಥೈರ್ಯವನ್ನು ಕಲಿಯುವಂತೆ, ಬೆಳೆಸಿಕೊಳ್ಳುವಂತೆ ಆಗಲು ಅವರಿಗೆ ನೀವು ಮಾದರಿಯಾಗಿ.
ವಿದ್ಯಾರ್ಥಿಗಳೇ ಯಶಸ್ಸು ಕನಸಲ್ಲ, ನನಸು. ಬೇಕಾಗಿರುವುದು ಧೈರ್ಯ, ಮನೋಸ್ಥೈರ್ಯ ಜೊತೆಗೊಂದಿಷ್ಟು ಕಠಿಣ ಪರಿಶ್ರಮದ ಕಲಿಕೆ ಅಷ್ಟೆ. ಮುಂದೆ ಇದೆ ಉತ್ತಮ ಜೀವನ, ಕೈ ಕೆಸರಾದರೆ ತಾನೇ ಬಾಯಿ ಮೊಸರು? ನೀವೇನಂತೀರಿ?

 


   @ಪ್ರೇಮ್@

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here