ಕೈಕಂಬ: ಪೊಳಲಿಯು ಸಪ್ತಮಾತ್ರಿಕೆಯರ ಕ್ಷೇತ್ರವಾಗಿದೆ. ದಾಖಲೆಗಳನ್ನು ಅವಲೋಖಿಸಿದಾಗ ಪೊಳಲಿ ಅವಿಭಜಿತ ಜಿಲ್ಲೆಯ ಅತ್ಯಂತ ಪ್ರಾಚೀನ ದೇವಸ್ಥಾನ ಎಂದು ಕಂಡುಕೊಳ್ಳಬಹುದು. ಪೊಳಲಿಗೆ ಸಂಬಂಧಿಸಿ ಹಲವಾರು ದಾಖಲೆಗಳು-ಶಿಲಾಶಾಸನಗಳು ಪತ್ತೆಯಾಗಿದೆ.ಇಲ್ಲಿ 4000ಕ್ಕಿಂತಲೂ ಅಧಿಕ ದೇವಸ್ಥಾನವಿರುವುದರಿಂದ ತುಳುನಾಡನ್ನು ದೇವರ ನಾಡೆಂದೂ ಕರೆಯಬಹುದು ಎಂದು ಶಿಕ್ಷಣ ಇತಿಹಾಸ ತಜ್ಞ ಪುಂಡಿಕಾ ಗಣಪತಿ ಭಟ್ ಹೇಳಿದರು.

1443ರಲ್ಲಿ ಮುಸ್ಲಿಂ ಯಾತ್ರಿಕನೊಬ್ಬ ಪೊಳಲಿಯಷ್ಟು ದೊಡ್ಡದಾದ ಮೃಣ್ಮಯ ಮೂರ್ತಿ ಇರುವ ದೇವಸ್ಥಾನ ಎಲ್ಲೂ ಕಂಡಿಲ್ಲ ಎಂದು ಹೇಳಿರುವುದು ದಾಖಲೆಗಳಲ್ಲಿ ಲಭ್ಯವಾಗಿದೆ. ಪೊಳಲಿಯ ಗರ್ಭಗುಡಿಯನ್ನು ಹಾಗೆಯೇ ಉಳಿಸಿ ದೇವಸ್ಥಾನವನ್ನು ನವೀಕರಿಸುವುದು ಇಲ್ಲಿನ ವಿಶೇಷತೆಯಾಗಿದೆ. ಈ ದೇವಸ್ಥಾನ ಅಲೂಪರ ಆದಿದೇವತೆಯಾಗಿತ್ತು. ಮತ್ತೊಂದು ಶಾಸನದಲ್ಲಿ 1390ರಲ್ಲಿ ಚೆಂಡಿನ ಬಗ್ಗೆ ಪ್ರಸ್ತಾಪವಾಗಿದೆ. ಕೆಳದಿಯ ಚೆನ್ನಮಾಜಿ ಆಗಮಿಸಿದ ಬಳಿಕ ಇಲ್ಲಿ 3 ದಿನದ ಚೆಂಡು ಐದು ದಿನಕ್ಕೆ ಏರಿರುವೂ ದಾಖಲೆಗಳಲ್ಲಿ ಪತ್ತೆಯಾಗಿದೆ. ಸುಲ್ತಾನ್ ಚೆಂಡಾಟ ನೋಡಿ ಬೆರಗುಗೊಂಡಿದ್ದ ಎನ್ನುವುದಕ್ಕೆ ಇಲ್ಲಿರುವ ಸುಲ್ತಾನ್ ಕಟ್ಟೆಯೇ ಸಾಕ್ಷಿಯಾಗಿದೆ. ಮೈಸೂರಿನ ಒಡೆಯರಾದ ಜಯಚಾಮಾರಾಜೇಂದ್ರ ಒಡೆಯರು ಪೊಳಲಿಗೆ ಆಗಮಿಸಿ ಕಂಠಹಾರವನ್ನು ಅರ್ಪಿಸಿ ತೆರಳಿದ್ದರು ಎಂದು ಪೊಳಲಿಯ ಸ್ಥೂಲ ಇತಿಹಾಸವನ್ನು ಪುಂಡಿಕಾ ಗಣಪತಿ ಭಟ್ ಪ್ರಸ್ತಾಪಿಸಿದರು.


ಗುರುಪುರ ಉಪ್ಪುಗೋಡು ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಪೊಳಲಿ ಕ್ಷೇತ್ರವು ಅಲೂಪರ ಆಡಳಿತ ಕಾಲದಲ್ಲಿ ಉಛ್ರಾಯ ಸ್ಥಿತಿಯಲ್ಲಿತ್ತು. ಅಂದಿನಿಂದ ಈ ಕ್ಷೇತ್ರವು ಬೆಳೆಯುತ್ತಾ ಸಾಗಿಬಂದಿದೆ. ಇಂದು ದೇವಸ್ಥಾನ ನವೀಕರಣಗೊಂಡು ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ ಎಂದು ಹೇಳಿದರು.
ಪೊಳಲಿಯಲ್ಲಿ ಬ್ರಹ್ಮಕಲಶೋತ್ಸವದ ಕ್ರಮಗಳು ಹಲವು ದಿನಗಳ ಕಾಲ ನಡೆಯುವುದರಿಂದ ಅಷ್ಟೂ ದಿನಗಳ ಕಾಲ ಭಕ್ತರಿಗೆ ಸತ್ಸಂಗ ದೊರಕಿದಂತಾಗುತ್ತದೆ. ಇದರ ಆಧ್ಯಾತ್ಮಿಕ ಲಾಭವನ್ನು ಪಡೆದುಕೊಂಡು ಅನುಭೂತಿ ಗಳಿಸೋಣ. ಹೊಟ್ಟೆ ಹಸಿವನ್ನು ತಣಿಸುವಂತೆಯೇ ಭಗವಂತನ ಹಸಿವನ್ನು ಹೆಚ್ಚಿಸಿ ದೇವರ ದಿವ್ಯ ಸಾನಿಧ್ಯ ಪ್ರಾಪ್ತವಾಗುವಂತೆ ನೋಡಿಕೊಳ್ಳೋಣ ಎಂದು ಶ್ರೀರಾಮ ಕ್ಷೇತ್ರ ನಿತ್ಯಾನಂದ ನಗರ ಕನ್ಯಾಡಿ ಧರ್ಮಸ್ಥಳ ಇಲ್ಲಿನ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಸಭಾಧ್ಯಕ್ಷತೆಯನ್ನು ಮಾಜಿ ಸಚಿವ ಅಮರ್‌ನಾಥ್ ಶೆಟ್ಟಿ ವಹಿಸಿದ್ದರು. ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ, ಬಿ. ರಮಾನಾಥ ರೈ, ಡಾ| ಮಂಜಯ್ಯ ಶೆಟ್ಟಿ, ಯು.ಟಿ ಆಳ್ವ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಚೇರ ಸೂರ್ಯನಾರಾಯಣ ರಾವ್, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಎಎಸ್‌ಪಿ ಸೈದುಲ್ ಅಡಾವತ್, ಕರಿಯಂಗಳ ಪಂ. ಅಧ್ಯಕ್ಷೆ ಚಂದ್ರಾವತಿ ಮುಂತಾದವರು ಉಪಸ್ಥಿತರಿದ್ದರು. ಈ ವೇಳೆ ಗುತ್ತಿಗೆದಾರರಾದ ರಮೇಶ್ ಮೇಸ್ತ್ರಿ ಹಾಗೂ ಕೇಶವ ಆಚಾರ್ಯ, ಶಿಲೆಕಲ್ಲಿನ ಶಿಲ್ಪಿ ಕೃಷ್ಣ ಮುರ್ಡೇಶ್ವರ, ಕಾಷ್ಠಶಿಲ್ಪಿ ಬಾಲಕೃಷ್ಣ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here