ಅದೇಕೋ ಮಧ್ಯರಾತ್ರಿಯಲ್ಲಿ ಬಾತ್ ರೂಮಿಗೆ ಹೋಗಬೇಕೆನಿಸಿ ನಿದ್ದೆ ಕಂಗಳಲ್ಲೇ ಹೋಗಿಬಂದಿದ್ದೆ.ಇನ್ನೇನು ಬೆಟ್ಶೀಟ್ ಹೊದ್ಕೊಂಡು ಮಲಗಬೇಕು ಅನಿಸುವಷ್ಟರಲ್ಲಿ ನನ್ನ ಪಕ್ಕ ಮಲಗಿದ್ದ ಮೂರು ವರುಷದ ಮಗು ವಿಚಿತ್ರವಾದ ಶಬ್ದ ಮಾಡುತ್ತಾ ಹೊರಳಾಡಲಾರಂಭಿಸಿತು. ಪಾಪು..ಎಂದು ಎಚ್ಚರಿಸಲು ಹೋದರೆ ನನ್ನ ಜಂಘಾಬಲವೇ ಉಡುಗಿ ಹೋಗಿತ್ತು. ವಿಪರೀತ ಜ್ವರ ಬಂದು ಮೈಯೆಲ್ಲ ಸುಡುತಿತ್ತು.ಜ್ವರ ನೆತ್ತಿಗೇರಿ ಮಗು ವಿಚಿತ್ರ ವರ್ತನೆ ತೋರಲಾರಂಭಿಸಿದಾಗ ನನಗೆ ಕೈಕಾಲು ನಡುಕ ಹತ್ತಿತ್ತು. ನನ್ನ ಪ್ರಪಂಚವೇ ನನ್ನ ಮುದ್ದು ಮಗು.ಅವನ ಒದ್ದಾಟ ಕಂಡು ಯಾರ ಸಹಾಯ ಪಡೆಯಬೇಕೋ ಗೊತ್ತಾಗದೆ ಒದ್ದಾಡಿದೆ. ಪತಿ ಕೆಲಸ ಕಾರ್ಯದ ನಿಮಿತ್ತ ಬೆಂಗಳೂರಿಗೆ ಹೋಗಿದ್ದರು. ಮಧ್ಯರಾತ್ರಿ 2 ಗಂಟೆ, ಇಷ್ಟೊತ್ತಲ್ಲಿ ಯಾರ ನೆರವು ಪಡೆಯಲಿ ? ಒಂದೂ ತಲೆಗೆ ಹೋಗದೆ ಭಯ ಗಾಬರಿಯಿಂದ ನಾನೇ ಬೀಳುವ ಹಾಗಾಯ್ತು.
ಇನ್ನು ತಡಮಾಡಿದರೆ ಅಪಾಯ ತಪ್ಪಿದ್ದಲ್ಲ ಅಂತ ಉಟ್ಟುಡುಗೆಯಲ್ಲೇ ಮಗುವನ್ನು ಎದೆಮೆಲೆ ಹಾಕ್ಕೊಂಡು ಹೊರಗೋಡಿ ಬಂದು ರಸ್ತೆಗೆ ಬಂದೆ. ಅಷ್ಟು ಹೊತ್ತಲ್ಲಿ ಯಾವ ವಾಹನ ತಾನೇ ಬರಲು ಸಾಧ್ಯ ?
ಗಡಿಬಿಡಿ ,ಗಾಬರಿಯಲ್ಲಿ ಆಂಬುಲೆನ್ಸ್ಗೆ ಕರೆ ಮಾಡೋದು ಮರ್ತುಬಿಟ್ಟೆ. ಮಗುವಿನ ಸ್ಥಿತಿ ತೀರಾ ಬಿಗಡಾಯಿಸುತಿತ್ತು.ನನ್ನ ಕರೆ,ಅಳು ಯಾವುದಕ್ಕೂ ಸ್ಪಂದನೆಯಿಲ್ಲದೇ ಹೋದಾಗ ಶಿವಪ್ಪಾ ಕಾಪಾಡು.. ನನ್ ಮಗುನ ಉಳಿಸ್ಕೊಡು ಅಂತ ಕಾಣದ ದೇವರಿಗೆ ಒಂದೇ ಸಮನೆ ಮೊರೆಯಿಟ್ಟಿದ್ದೆ.ಅಷ್ಕರಲ್ಲಿ ದೂರದಲ್ಲಿ ಅದಾವುದೋ ಒಂದು ವಾಹನದ ಬೆಳಕು ಕಾಣಿಸಿತು.ಅದು ಲಾರಿಯೋ ಜೀಪೋ ಕಾರೋ ಒಂದೂ ಗಮನಿಸಲಿಲ್ಲ,ಹತ್ತಿರಕ್ಕೆ ಬಂದ ತಕ್ಷಣ ನಡುರಸ್ತೆಗೆ ಹೋಗಿ ನಿಂತು ಕೈ ಅಡ್ಡ ಹಿಡಿದು ನಿಲ್ಲಿಸುವಂತೆ ಸೂಚಿಸಿದೆ, ಸದ್ಯ ವಾಹನ ನಮ್ಮ ಮೇಲೆ ಹರಿದು ಬರದೆ ಕೊಂಚ ದೂರದಲೇ ನಿಂತು ಬಾಗಿಲು ತೆರೆಯಿತು.ಪ್ಲೀಸ್ ಪ್ಲೀಸ್ ಬೇಗ ಹೋಗಿ,ಒಮ್ಮೆ ಆಸ್ಪತ್ರೆ ತಲುಪಿಸಿ,ನನ್ ಮಗುನ ಉಳಿಸಿ ಅಂತ ಆ ಅಪರಿಚಿತ ಚಾಲಕನಲ್ಲಿ ಮೊರೆಯಿಟ್ಟಿದ್ದೆ. ನನ್ನ ಪರಿಸ್ಥಿತಿ, ಅಳು, ಮಗುವನ್ನು ನೋಡಿ ಆ ಚಾಲಕನೂ ಗಾಬರಿಯಾಗಿದ್ದ.ಸಮಾಧಾನ ಮಾಡ್ಕೋಮ್ಮ.. ದೇವರಿದಾನೆ ಅಂತ ಎಷ್ಟು ಸಾಧ್ಯವಿದೆಯೋ ಅಷ್ಷು ವೇಗದಲ್ಲಿ ಗಾಡಿ ಚಲಾಯಿಸತೊಡಗಿದ.ನನಗೆ ಯಾವ ಪರಿಜ್ಞಾನವೂ ಇಲ್ಲ,ಮಗುವಿನ ಪ್ರಾಣ ಉಳಿಸ್ಬೇಕು ಅನ್ನೋದಷ್ಟೇ ನನ್ನ ಮುಂದಿದ್ದ ಭಯಾನಕ ಪರಿಸ್ಥಿತಿಯಾಗಿತ್ತು.
ಮಗುವಿನ ದೇಹ ಆಗಲೇ ತಣ್ಣಗಾದ ಅನುಭವ…
ಶಿವಾ ಕೊಟ್ಟದ್ದೂ ನೀನೆ…ಕಿತ್ಕೊಳ್ಳುವವನು ನೀನೇ ಆದರೆ ಯಾರ ಆಸರೆ ಬಯಸಲಿ ಎಂದು ಮೂಕವಾಗಿ ರೋಧಿಸಿದೆ…
ಆಂಬುಲೆನ್ಸ್ಗಿಂತಲೂ ವೇಗವಾಗಿ ಬಂದ ಆ ವಾಹನ ಆಸ್ಪತ್ರೆ ತಲುಪಿತು. ಆ ಚಾಲಕನಿಗೆ ಕೃತಜ್ಞತೆ ಹೇಳುವುದನ್ನೂ ಮರ್ತು ಮಗುವನ್ನೆತ್ತಿಕೊಂಡು ವೈದ್ಯರ ಬಳಿ ಓಡಿ ಹೋದೆ…
ಮಗುವನ್ನು ಪರೀಕ್ಷಿಸಿದ ವೈದ್ಯರ ಮುಖದಲ್ಲೂ ದಿಗಿಲು.ತಕ್ಷಣವೇ ಆಕ್ಸಿಜನ್ ನ ವ್ಯವಸ್ಥೆ ಮಾಡಿದರು.ನನ್ನ ಕಂಗಳಲ್ಲಿ ತುಂಬಿ ಹರಿದ ನೀರು ಬಹುಷಃ ಶಿವನೆದೆಯನ್ನು ತೋಯಿಸಿತೋ ಏನೋ. ಆಶ್ಚರ್ಯ ಎಂಬಂತೆ ಮಗು ಉಸಿರಾಡತೊಡಗಿತು….ಐದು ನಿಮಿಷಗಳ ನಂತರ ನನ್ನ ಕರೆಗೆ ಮಗು ಸ್ಪಂದಿಸತೊಡಗಿತು.ಮೆಲ್ಲನೆ ಕಣ್ಬಿಟ್ಟು ಅಮ್ಮ..ಎಂದು ಕರೆದಾಗ ನನಗೆ ನಾನು ನಿಜಕ್ಕೂ ಸತ್ತು ಬದುಕಿದ ಅನುಭವ…!ನನ್ನ ಮುದ್ದು ಮಗು ಚೇತರಿಸಿಕೊಂಡಿತ್ತು.ಅಪ್ಪಿ ಮನದಣಿಯೆ ಮುದ್ದಾಡಿದೆ.
ಆಗಲೇ ಕೊಂಚ ಬೆಳಕು ಮೂಡಿತ್ತು.ನನಗಾಗ ನೆನಪಾಗಿದ್ದು ಆಪತ್ಬಾಂಧವನಂತೆ ಬಂದ ಆ ವಾಹನ ಚಾಲಕ.ಕೃತಜ್ಞತೆ ಸಲ್ಲಿಸೋಣವೆಂದು ಬಂದರೆ ಅವನೆಲ್ಲೂ ಕಾಣಲಿಲ್ಲ.ಮಗು ವೈದ್ಯರ ಕೈ ಸೇರೋವರೆಗೂ ನನ್ನ ಜೊತೆ ಇದ್ದ ಆ ಚಾಲಕ ಎಲ್ಲಿ ಹೋದನೋ ಏನೋ.ಸಾಮಾನ್ಯ ಮನುಷ್ಯನ ತರ ಕಾಣಿಸದೆ ಶಿವಸ್ವರೂಪಿಯಾಗಿ ಕಂಡ ಅವನಿಗೆ ಅವನ ಕುಟುಂಬಕ್ಕೆ ನಾನೀಗಲೂ ಕೃತಜ್ಞಳಾಗಿದೀನಿ. ಅವನ ಕುಟುಂಬ ಯಾವಾಗಲೂ ನೆಮ್ಮದಿಯಾಗಿರಲಿ ಅಂತ ಮನಸಾರೆ ಹಾರೈಸ್ತೇನೆ…
*ಶಿವ ಯಾವತ್ತೂ ನಂಬಿದವರನ್ನು ಕೈ ಬಿಡಲ್ಲ* ಎಂಬುದಕ್ಕೆ ನಾನೇ ಜೀವಂತ ಸಾಕ್ಷಿ.

 

 

*ಪ್ರಮೀಳಾ ರಾಜ್*

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here