ವಿಟ್ಲ: ಧಾರ್‍ಮಿಕ ಚಿಂತನೆಯಿರುವ ವ್ಯಕ್ತಿಯಿಂದ ಪ್ರತಿಯೊಬ್ಬರೂ ಮೆಚ್ಚುವಂತಹ ಕಾರ್‍ಯ ನಡೆಯಲು ಸಾಧ್ಯ. ನಾವು ಮಾಡುವ ಸತ್ಕಾರ್‍ಯಗಳನ್ನು ಸಮಾಜವೇ ಗುರುತಿಸಿ ಗೌರವಿಸುತ್ತದೆ. ಮಾತೆಯರ ಮೂಲಕ ಸಂಸ್ಕಾರ, ಸಂಸ್ಕೃತಿಗಳ ಪಾಠ ಮಕ್ಕಳಿಗೆ ಸಿಗಬೇಕು ಎಂದು ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಹೇಳಿದರು.
ಅವರು ಗುರುವಾರ ಮಾಣಿಲ ಗ್ರಾಮದ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ಶ್ರೀದೇವಿಯ 52ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವದ ಧಾರ್‍ಮಿಕ ಸಭೆಯಲ್ಲಿ ಇಬ್ಬರು ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಮಾನವೀಯ ಮೌಲ್ಯದೊಂದಿಗೆ ಬದುಕುವುದೇ ಈ ಜನ್ಮದ ಕರ್ತವ್ಯವಾಗಿದೆ ಎಂದರು.
ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಿಶಾಲ್ ಮೋನಿಸ್ ಮಾತನಾಡಿ ಧರ್ಮಗುರುಗಳ ಮೂಲಕ ಬೊಧಿಸಲ್ಪಟ್ಟ ವಿಚಾರಗಳು ಸಮಾಜದ ಮೇಲೆ ಪ್ರಭಾವ ಬೀರುತ್ತವೆ. ವಿಘಟಿತ ಸಾಮಾಜಿಕ ಪರಿಸ್ಥಿತಿಯಲ್ಲಿಯೂ ಧರ್ಮಗುರುಗಳ ಸದ್ಭೋದನೆ ಅತ್ಯವಶ್ಯಕವಾಗಿದೆ. ನಾವೆಲ್ಲರೂ ಒಂದೇ ಮನಸ್ಸಿನಿಂದ ಒಗ್ಗೂಡಿ ಸ್ವಸ್ಥ ಸಮಾಜಕ್ಕೆ ಕೈಜೋಡಿಸಬೇಕು. ಶ್ರೀಕ್ಷೇತ್ರದ ಮೂಲಕ ಉತ್ತಮ ಸಾಮಾಜಿಕ ಸೇವೆಗಳು ನಡೆಯುತ್ತಿವೆ ಎಂದರು.
ಸನ್ಮಾನ ಸ್ವೀಕರಿಸಿದ ಮಾಜಿ ಶಾಸಕಿ ಟಿ.ಶಕುಂತಳಾ ಶೆಟ್ಟಿ ಮಾತನಾಡಿ ಧರ್ಮ ಪಾಲನೆ ನಮ್ಮ ಬದುಕನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ವ್ಯಕ್ತಿವ್ಯಕ್ತಿಯಲ್ಲಿ ದೇವರನ್ನು ಕಂಡಾಗ ನಮ್ಮಲ್ಲಿರುವ ದ್ವೇಷ, ಅಸೂಯೆಯಾದಿ ದುರ್ಗುಣಗಳು ದೂರವಾಗಿ ಒಳ್ಳೆಯ ಮನುಷ್ಯರಾಗಬಹುದು ಎಂದು ತಿಳಿಸಿದರು.
ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಭೆಯಲ್ಲಿ ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಕಾಸರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಲನಚಿತ್ರ ನಟಿ ಸಪ್ತಾ ಪಾವೂರು ಭಾಗವಹಿಸಿದ್ದರು. ಸಾಮಾಜಿಕ ಕಾರ್‍ಯಕರ್ತ ರಾಜೇಶ್ ಶಂಕರ್ ಬೈಕುಂಜ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರ ಕುಕ್ಕಾಜೆಯ ಮೊಕ್ತೇಸರ ಎಂ.ಕೆ.ಕುಕ್ಕಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಸ್ಕರ ಕುಂಬಳೆ ಸ್ವಾಗತಿಸಿದರು. ಗಿರೀಶ್ ಕುಕ್ಕಾಜೆ ಸನ್ಮಾನ ಪತ್ರ ವಾಚಿಸಿದರು. ರವಿ. ಎಸ್.ಎನ್ ವಂದಿಸಿದರು. ಶಶಿಕುಮಾರ್ ಕೂಳೂರು ಕಾರ್‍ಯಕ್ರಮ ನಿರೂಪಿಸಿದರು.
ಬೆಳಗ್ಗೆ ಮಣಿಯಂಪಾರೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ಅವರಿಂದ ಕುಣಿತ ಭಜನೆ, ದರ್ಶನ ಬಲಿ ಉತ್ಸವ, ಪ್ರಸಾದ ವಿತರಣೆ ನಡೆಯಿತು. ಸಭೆಯ ಬಳಿಕ ಉಳ್ಳಾಲ ಮಂತ್ರ ನಾಟ್ಯಕಲಾ ಗುರುಕುಲದ ಕಲಾವಿದರಿಂದ ಭರತನಾಟ್ಯ ಪ್ರಸ್ತುತಗೊಂಡಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here