

ವಿಟ್ಲ: ಧರ್ಮ ಮತ್ತು ಸಂಸ್ಕೃತಿಗಳು ಒಂದನ್ನೊಂದು ಬಿಟ್ಟಿರುವುದಿಲ್ಲ. ಶ್ರದ್ಧಾ ಕೇಂದ್ರಗಳನ್ನು, ಮನೆಯ ಹಿರಿಯರನ್ನು ಕಡೆಗಣಿಸಿದಾಗ ಅನರ್ಥ ಸಂಭವಿಸುತ್ತದೆ. ಉತ್ತಮ ಮನಸ್ಸುಗಳು ಒಟ್ಟಾದಾಗ ಒಳ್ಳೆಯ ಕಾರ್ಯ ನಡೆಯುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಪುಣಚ ಗ್ರಾಮದ ಬಡೆಕನಡ್ಕ ಎಂಬಲ್ಲಿ ರಕ್ತೇಶ್ವರಿ, ಪಂಜುರ್ಲಿ, ಗುಳಿಗ, ಭೈರವ ಸಾನ್ನಿಧ್ಯಗಳ ಜೀರ್ಣೋದ್ಧಾರ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು. ನಮ್ಮನ್ನು ಕಾಯುವ ಯೋಧರಲ್ಲಿ ಇನ್ನೂ ನೈತಿಕ ಸ್ಥೈರ್ಯ ಮೂಡುವಂತೆ ಸಾಮೂಹಿಕವಾಗಿ ಪ್ರಾರ್ಥಿಸೋಣ. ಯುವಕರು ಯಾವುದೇ ಕ್ಷೇತ್ರದಲ್ಲಿ ಕಾರ್ಯ ಮಾಡಿದರೂ ದೇಶಪ್ರೇಮಿಗಳಾಗಿರಬೇಕೆಂದು ಕರೆ ನೀಡಿದರು.
ದೈವಸ್ಥಾನ ಜೀಣೋದ್ಧಾರ ಕೈಂಕರ್ಯಕ್ಕೆ ಊರಪರವೂರಿನ ಬಂಧುಗಳ ಸಹಕಾರವಿರುತ್ತದೆ. ಸಂಘಟಿತರಾಗಿ ಕಾರ್ಯವನ್ನು ಪೂರ್ಣಗೊಳಿಸುವ ಉತ್ಸಾಹ ಬೇಕು ಎಂದು ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ತಿಳಿಸಿದರು.
ಸಾಮೂಹಿಕವಾಗಿ ನಿರ್ಮಾಣವಾಗುವ ಸಾನ್ನಿಧ್ಯ ವಿಶೇಷ ಶಕ್ತಿಯಿಂದ ಕೂಡಿರುತ್ತದೆ. ಅಂತರಂಗ ನಿರ್ಮಲವಾಗಲು ಇಂತಹ ಕ್ಷೇತ್ರಗಳು ಕಾರಣವಾಗುತ್ತವೆ ಎಂದು ಹಿರಿಯ ಸಾಹಿತಿ ತಾಳ್ತಜೆ ವಸಂತ ಕುಮಾರ್ ಹೇಳಿದರು.
ಸಮಾರಂಭದಲ್ಲಿ ಭಾಗವಹಿಸಿದ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು, ಪುರೋಹಿತ ಶ್ರೀರಾಮ್ ಮುಗುಳಿ ಭಾಗವಹಿಸಿದ್ದರು.
ಜಯರಾಮ ಶಾಸ್ತ್ರಿ ಮಣಿಲ ಸ್ವಾಗತಿಸಿದರು. ಜೀಣೋಧ್ಧಾರ ಸಮಿತಿ ಅಧ್ಯಕ್ಷ ವಿಠಲ ಶಾಸ್ತ್ರಿ ಮಣಿಲ ಪ್ರಸ್ತಾವಿಸಿದರು. ಸಹ ಕಾರ್ಯದರ್ಶಿ ನಾರಾಯಣ ಮೂಲ್ಯ ಪಿ ವಂದಿಸಿದರು. ಪುಣಚ ದೇವಿ ನಗರ ಶ್ರೀದೇವಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಗಂಗಮ್ಮ ಕಾರ್ಯಕ್ರಮ ನಿರೂಪಿಸಿದರು.








