Tuesday, October 31, 2023

’ಸಾರ್ವಕಾಲಿಕ ಸಾಹಿತ್ಯಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ’- ಒಡಿಯೂರು ಶ್ರೀ

Must read

ವಿಟ್ಲ: ಧರ್ಮವನ್ನು ಬಿಟ್ಟು ಬದುಕು ನಡೆಸಲು ಅಸಾಧ್ಯ. ಧರ್ಮ ಎಂಬ ಸೂತ್ರದಲ್ಲಿ ಬದುಕು ನಡೆಯಬೇಕು. ಸಮೃದ್ಧ ತುಳು ಭಾಷೆಯ ಸಂಪತ್ತನ್ನು ಅರಿಯುವ ಪ್ರಯತ್ನವಾಗಬೇಕು. ತುಳುನಾಡಿನಲ್ಲಿ ತುಳುವನ್ನು ಹುಡುಕಬೇಕಾದ ಪರಿಸ್ಥಿತಿ ಬರಬಾರದು. ತುಳು ಅಧ್ಯಯನ, ಪಠ್ಯಕಲಿಕೆಯ ಮೂಲಕ ಭಾಷೆಯನ್ನು ಇನ್ನೂ ಬೆಳೆಸಬೇಕಾಗಿದೆ. ಸಾರ್ವಕಾಲಿಕ ಸಾಹಿತ್ಯಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಗುರುವಾರ ಒಡಿಯೂರು ಆತ್ರೇಯ ಮಂಟಪದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ವತಿಯಿಂದ ತುಳುನಾಡ್ದ ಜಾತ್ರೆಯ ಅಂಗವಾಗಿ ನಡೆದ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸಂಸ್ಕಾರದ ಮೂಲಕ ನಿರಂತರ ಸಂಸ್ಕೃತಿ ಹರಿಯುತ್ತದೆ. ಸಾಹಿತ್ಯ ಸಹಿಸುವುದಕ್ಕೆ ಸಾಧ್ಯವಾಗಬೇಕು. ಸಾಹಿತ್ಯ ಸಮಾಜಮುಖಿಯಾದಾಗ ಪರಿವರ್ತನೆ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ ಸಂಶೋಧಕಿ ಡಾ. ಇಂದಿರಾ ಹೆಗ್ಡೆ ಮಾತನಾಡಿ ತುಳುನಾಡು ಮಹಿಳೆಯರ ಹೆಮ್ಮೆಯ ನಾಡು. ತುಳುನಾಡಿನ ಸಂಸ್ಕೃತಿ ವಿನಾಶಕ್ಕೆ ವಿಶೇಷ ಆರ್ಥಿಕ ವಲಯ ನಿರ್ಮಾಣವೂ ಕಾರಣವಾಗಿದೆ. ನಾಗ, ದೇವಸ್ಥಾನ, ದೈವಸ್ಥಾನಗಳ ನಾಶದ ಮೂಲಕ ತುಳು ಸಂಸ್ಕೃತಿಯ ನಾಶವಾಗಿದೆ. ತುಳುನಾಡ ಆರಾಧನೆಗಳು ಅವಹೇಳನಕ್ಕೆ ಅವಕಾಶ ನೀಡದಂತೆ ನಾವೇ ಜಾಗೃತರಾಗಬೇಕಾಗಿದೆ. ದೈವರಾಧನೆಯ ಬಗ್ಗೆ ಶ್ರದ್ಧೆ, ನಂಬಿಕೆ ಬೆಳೆಯುವಂತಾಗಬೇಕು. ಭೂತ ಕೋಲ, ನೇಮೋತ್ಸವಗಳ ವೀಡಿಯೋ ದಾಖಲೀಕರಣ ಸರಿಯಲ್ಲ ಎಂದು ತಿಳಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ. ಸಿ. ಭಂಡಾರಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ತುಳು ಸಂಸ್ಕೃತಿಯ ತಿರುಳು ಅಡಗಿದೆ. ಅಕಾಡೆಮಿಯ ಮೂಲಕ ಜಿಲ್ಲೆಯ 45 ಶಾಲೆಗಳಲ್ಲಿ ತುಳುವನ್ನು ಕಲಿಸುವ ಕಾರ್‍ಯ ನಡೆಯುತ್ತಿದೆ. ತುಳು ವಿಷಯದಲ್ಲಿ ೬೬೦ ವಿದ್ಯಾರ್ಥಿಗಳು ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಮುಂದಿನ ವರ್ಷ 22 ವಿದ್ಯಾರ್ಥಿಗಳು ಎಂಎ ಪದವಿ ಪಡೆಯುತ್ತಿರುವುದು ತುಳುವಿಗೆ ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಸಾಧ್ವಿ ಮಾತಾನಂದಮಯೀ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ಉಗ್ಗಪ್ಪ ಪೂಜಾರಿ ಅವರ ’ಅಜ್ಜೆ ನಡ್ತಿನ ಗೋಲಿದ ಮರ’ ಪುಸ್ತಕ ಹಾಗೂ ಪೂವರಿ ತುಳು ಪತ್ರಿಕೆಯ ೫೦ ನೇ ಸಂಚಿಕೆಯ ಬಿಡುಗಡೆ ಮಾಡಲಾಯಿತು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆ ಸಂಚಾಲಕ ಸೀತಾರಾಮ ರೈ ಸವಣೂರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ರೇಣುಕಾ ಎಸ್. ರೈ ಒಡಿಯೂರು ಪ್ರಾರ್ಥಿಸಿದರು. ಒಡಿಯೂರು ತುಳುಕೂಟದ ಸ್ಥಾಪಕ ಅಧ್ಯಕ್ಷ ಮಲಾರ್ ಜಯರಾಮ ರೈ ಸ್ವಾಗತಿಸಿದರು. ತುಳು ಕಾರ್‍ಯಕ್ರಮ ಸಂಚಾಲಕ ಡಾ. ವಸಂತ ಕುಮಾರ್ ಪೆರ್ಲ ಪ್ರಸ್ತಾವನೆಗೈದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಸಂಪನ್ಮೂಲ ವ್ಯಕ್ತಿ ವಿಶ್ವನಾಥ ಶೆಟ್ಟಿ ವಂದಿಸಿದರು. ಪ್ರದೀಪ್ ಆಳ್ವ ಕುಡ್ಲ ಕಾರ್‍ಯಕ್ರಮ ನಿರೂಪಿಸಿದರು.

ಸಮ್ಮೇಳನದ ಅಂಗವಾಗಿ ಶ್ರೀಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿಗಳ ಪ್ರದರ್ಶನ, ಹಿರ್ಗಾನ ನೆಲ್ಲಿಕಟ್ಟೆ ಶ್ರೀದತ್ತ ತುಳು ಜಾನಪದ ಮತ್ತು ಇತಿಹಾಸ ಅಧ್ಯಯನ ಕೇಂದ್ರದ ವತಿಯಿಂದ ಹಳೆಯ ವಸ್ತುಗಳ, ಪುಸ್ತಕ, ನಾಣ್ಯಗಳ ಪ್ರದರ್ಶನ, ಕುಲಕಸುಬು ಪ್ರಾತ್ಯಕ್ಷಿಕೆ ನಡೆದವು.

More articles

Latest article