



ವಿಟ್ಲ: ಅರುವತ್ತು ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುವವರಿದ್ದಾರೆ. ಆದರೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ದೇಶದಲ್ಲಿ ಹಲವು ಸಮಸ್ಯೆಗಳು ಕಾಡುತ್ತಿದ್ದವು. ಕಾಂಗ್ರೆಸ್ ಪಕ್ಷ ಅನೇಕ ಕ್ರಾಂತಿಕಾರಿ ಪರಿವರ್ತನೆಯನ್ನು ತಂದಿದೆ. ಎಲ್ಲರ ಒಗ್ಗಟ್ಟು ಇದ್ದಾಗ ಬಲಿಷ್ಠ ಪಕ್ಷವಾಗಿ ಹೊರ ಹೊಮ್ಮಲು ಸಾಧ್ಯ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.
ಅವರು ಅಳಿಕೆ ಚೆಂಡುಕಳದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಮೋದಿ ಸರಕಾರ ಬಂದ ಬಳಿಕ ಶೇ.೧೬ ರಷ್ಟು ಅತ್ಯಾಚಾರ ಪ್ರಕರಣ ಹೆಚ್ಚಾಗಿದೆ. ರಾವಣನಿಗೆ ಹಲವು ತಲೆ ಇದ್ದ ಹಾಗೆ ಬಿಜೆಪಿಗೆ ಹಲವು ಸಂಘಟನೆಗಳು ಇವೆ. ಅಪಪ್ರಚಾರಗಳಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗುತ್ತಿದೆ ಎಂಬುದನ್ನು ತಿಳಿಸುವ ಕಾರ್ಯವಾಗಬೇಕು. ಸುಳ್ಳೇ ಸತ್ಯವಾಗಿಸುವ ಸಮಯದಲ್ಲಿ, ಇದನ್ನೆಲ್ಲ ತಪ್ಪಿಸಲು ಕಾಂಗ್ರೆಸ್ ಸಂಘಟನೆಯಾಗಬೇಕಾಗಿದೆ. ನಮ್ಮ ಊರುಗಳಲ್ಲಿ ಮತ್ತೆ ಬಿಜೆಪಿ ಹುಟ್ಟದ ಹಾಗೆ ನೋಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಮತದಾರರ ಪಟ್ಟಿಗೆ ಎಷ್ಟು ಜನರ ಸೇರ್ಪಡೆ ಮಾಡಿದ್ದೇವೆ ಎಂಬುದನ್ನು ನಾವು ನಮ್ಮನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ. ಜನರಿಗೆ ಕೆಲಸ ಮಾಡಲು ಒಬ್ಬರು, ಮತಕ್ಕೆ ಇನ್ನೊಬ್ಬರಿಗೆ ಎಂಬುದಾಗುತ್ತಿದೆ. ಪ್ರತಿಯೊಬ್ಬರು ಮಾತಾಡುವ ಮೂಲಕ ಜನರ ಮನಸ್ಸಿಗೆ ನೈಜತೆ ತಿಳಿಸುವ ಕಾರ್ಯವಾಗಬೇಕು. ಜನರನ್ನು ಸರಿಯಾಗಿ ತಲುಪುವ ಕಾರ್ಯ ಕಾಂಗ್ರೆಸ್ ನಿಂದ ಆಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ ಎಸ್ ಮಹಮ್ಮದ್, ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಅಳಿಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸರಸ್ವತಿ, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ಅಳಿಕೆ ವಲಯ ಅಧ್ಯಕ್ಷ ಸೀತಾರಾಮ ಶೆಟ್ಟಿ ಮುಳಿಯ ಸ್ವಾಗತಿಸಿದರು. ಮಹಿಳಾ ಘಟಕ ಅಧ್ಯಕ್ಷೆ ಕವಿತಾ ರಮೇಶ್ ವಂದಿಸಿದರು. ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಪ್ರಸ್ತಾವನೆಗೈದು, ಕಾರ್ಯಕ್ರಮ ನಿರೂಪಿಸಿದರು.





