ಉಜಿರೆ: ಧರ್ಮಸ್ಥಳದಲ್ಲಿ ಬುಧವಾರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಗಣಧರ ವಲಯ ಆರಾಧನೆ ನಡೆಯಿತು.
ಪೂಜ್ಯ ವರ್ಧಮಾನ ಸಾಗರ ಮುನಿ ಮಹಾರಾಜರು, ಪುಷ್ಪದಂತ ಸಾಗರ ಮುನಿ ಮಹಾರಾಜರು, ಪುಣ್ಯಸಾಗರ ಮುನಿ ಮಹಾರಾಜರು, ಸಿದ್ಧಸೇನ ಮುನಿ ಮಹಾರಾಜರು, ಕುಮುದನಂದಿ ಮುನಿಮಹಾರಾಜರು ಹಾಗೂ ಮುನಿಸಂಘದವರು ಮತ್ತು ಮಾತಾಜಿಯವರು ಉಪಸ್ಥಿತರಿದ್ದರು.

                           
ಪೂಜ್ಯ ಪುಣ್ಯಸಾಗರ ಮುನಿಮಹಾರಾಜರು ಮಂಗಲ ಪ್ರವಚನ ನೀಡಿ ಅನಾದಿ ಕಾಲದಿಂದ ಆತ್ಮನಿಗಂಟಿದ ಕರ್ಮದ ಕ್ಷಯ ಮಾಡಲು ಧರ್ಮದ ಅನುಷ್ಠಾನ ಮಾಡಬೇಕು. ತ್ಯಾಗ ಮಾಡಿದಾಗ ಅತೀವ ಸಂತೋಷ ಮತ್ತು ನೆಮ್ಮದಿ ಸಿಗುತ್ತದೆ. ವೈರಾಗ್ಯ ಭಾವನೆಯಿಂದ ಹಾಗೂ ಧರ್ಮ ಧ್ಯಾನದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದರು. ಭಾವ ಹಿಂಸೆಯಿಂದ ಪಾಪಕರ್ಮ ಬಂಧವಾಗುತ್ತದೆ ಎಂದು ಅವರು ಹೇಳಿದರು.
ಪೂಜ್ಯ ಸಿದ್ಧಸೇನ ಮುನಿಮಹಾರಾಜರು ಮಾತನಾಡಿ, ಮುನಿಗಳ ದರ್ಶನ ಮತ್ತು ಸೇವೆಯಿಂದ ಸಕಲ ರೋಗಗಳ ನಿವಾರಣೆಯಾಗುತ್ತದೆ ಎಂದರು.
ನರಸಿಂಹರಾಜಪುರ ಸಿಂಹನಗದ್ದೆ ಮಠದ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮಸ್ಥಳ ಇಂದು ಚತುರ್ವಿಧ ದಾನ ಪರಂಪರೆಯಿಂದ ಹಾಗೂ ಬಹುಮುಖಿ ಸಮಾಜ ಸೇವಾ ಕಾರ್ಯಗಳಿಂದ ಜಾಗತಿಕ ಮನ್ನಣೆ ಪಡೆದಿದೆ. ಇಲ್ಲಿ ಸದಾ ಧರ್ಮ ಜಾಗೃತಿ ಮತ್ತು ಧರ್ಮ ಪ್ರಭಾವನಾ ಕಾರ್ಯಗಳು ನಡೆಯುತ್ತಿವೆ.
ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಹೇಮಾವತಿ ಹೆಗ್ಗಡೆಯವರು, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಶ್ರದ್ಧಾ ಅಮಿತ್ ಮಾರ್ಗದರ್ಶನದಲ್ಲಿ ನಡೆಯುವ ಪಂಚಮಹಾವೈಭವ ಆಕರ್ಷಕ ಕಾರ್ಯಕ್ರಮವಾಗಿದೆ ಎಂದರು.
ಧರ್ಮಸ್ಥಳದಲ್ಲಿ ಮಸ್ತಕಾಭಿಷೇಕದಲ್ಲಿ ಪಾವನ ಸಾನ್ನಿಧ್ಯ ನೀಡಲು 108 ಮಂದಿ ದಿಗಂಬರ ಮುನಿಗಳು ಹಾಗೂ ಮಾತಾಜಿಯವರು ಆಗಮಿಸಿರುವುದು ಐತಿಹಾಸಿಕ ಘಟನೆಯಾಗಿದೆ.


ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕರು, ಸೋಂದಾ ಮಠ ಹಾಗೂ ನರಸಿಂಹರಾಜಪುರ ಜೈನಮಠದ ಪರವಾಗಿ ಧರ್ಮಸ್ಥಳಕ್ಕೆ ಸ್ವಾಮೀಜಿಯವರು ಬುಧವಾರ ಹೊರೆಕಾಣಿಕೆಯನ್ನು ಅರ್ಪಿಸಿದರು.
ತಾವು ಸಿಂಹನಗದ್ದೆ ಮಠದ ಭಟ್ಟಾರಕನಾಗಿ ಪಟ್ಟಾಭಿಷಿಕ್ತರಾಗುವ ಮೊದಲು ಧರ್ಮಸ್ಥಳಕ್ಕೆ ಬಂದಾಗ ಬೀಡಿನಲ್ಲಿ ಹೆಗ್ಗಡೆಯವರು ಹೇಳಿದ ಮಾತನ್ನು ಸ್ವಾಮೀಜಿ ಸ್ಮರಿಸಿದರು. ಅಪೇಕ್ಷೆ ಪಡಬೇಡಿ, ಉಪೇಕ್ಷೆ ಮಾಡಬೇಡಿ. ಈ ಮಾತು ತಮಗೆ ಹೆಚ್ಚು ಪ್ರಭಾವ ಬೀರಿದೆ ಎಂದು ಸ್ವಾಮೀಜಿ ಹೇಳಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಅನಿತಾ ಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಸೋನಿಯಾ ವರ್ಮ, ಡಾ. ರಜತ ಹಾಗೂ ಸ್ಥಳೀಯ ಶ್ರಾವಕಿಯರು ಆರಾಧನೆಯಲ್ಲಿ ಭಾಗವಹಿಸಿ ಪುಣ್ಯ ಭಾಗಿಗಳಾದರು.

ಅನ್ನಪೂರ್ಣ ಉದ್ಘಾಟನೆ

ಉಜಿರೆ: ಧರ್ಮಸ್ಥಳದಲ್ಲಿ ಫೆ. 9 ರಿಂದ 18ರ ವರೆಗೆ ನಡೆಯಲಿರುವ ಬಾಹುಬಲಿ ಮಹಾಮಸ್ತಕಾಭಿಷೇಕ ನಿಮಿತ್ತ ಹೊಸ ಅನ್ನಪೂರ್ಣ ಛತ್ರಕ್ಕೆ ಬುಧವಾರ ಚಾಲನೆ ನೀಡಲಾಯಿತು.

                                                                      

ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಆರ್.ಯನ್. ಪೂವಣಿ, ಉಜಿರೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here