ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಜ.30 ರಂದು ಬುಧವಾರ ಗೊನೆ ಕಡಿದು, ಫೆ.5 ರ ಮಂಗಳವಾರ ರಾತ್ರಿ 10 ಗಂಟೆಗೆ ಭಂಡಾರಯೇರಿ, ಫೆ.6 ರ ಬುಧವಾರ ಬೆಳಿಗ್ಗೆ 9 ಗಂಟೆಗೆ ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ನಡೆಯಲಿದೆ ಮತ್ತು ಸಂಜೆ 4 ರಿಂದ ಶ್ರಿ ಗುಡ್ಡೆ ಚಾಮುಂಡಿ- ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ.

ಹಿನ್ನೆಲೆ: ದೇವರಿಗಿಂತ ಹೆಚ್ಚಾಗಿ ತುಳುನಾಡಿನ ಮಾತೃತ್ವ ಸ್ವರೂಪಿಣಿ ದೈವಗಳು ನಮ್ಮ ತುಳುನಾಡಿನ ಪ್ರದೇಶದಲ್ಲಿ ಮಾತ್ರ ಅಲ್ಲದೆ ದೂರದ ಪ್ರಾದೇಶಿಕ ವ್ಯಾಪ್ತಿಯಲ್ಲಿ ತಮ್ಮ ಕಾರಣಿಕ ಪ್ರಭಾವದಿಂದಾಗಿ ಹೆಚ್ಚು ಗೌರವ ಪಡೆದಿದೆ. ಇಂತಹ ದೈವಗಳ ಸಾಲಲ್ಲಿ ಸಮಾಜದ ರೀತಿ ರಿವಾಜನ್ನು ಪ್ರಶ್ನಿಸಿ ಸಮಾಜವನ್ನು ಅಭಿವೃದ್ಧಿಪಡಿಸುತ್ತೇನೆ ಎಂದ ಕಾಯ ಬಿಟ್ಟು ಮಾಯ ಸೇರಿ ತುಳುನಾಡಲ್ಲಿ ಹೆಸರು ಪಡೆದ ರಾಜನ್ ದೈವ (Mother- Goddess)ವೇ ಶ್ರೀ ಉಳ್ಳಾಲ್ತಿ ದೈವ. ಉಳ್ಳಾಲ್ತಿ ಅಮ್ಮನವರು ಎಂದರೆ ದೇವಿಗೆ ಅತ್ಯಂತ ಸಮೀಪದ ಮಾತೃ ಶಕ್ತಿ. ಪಾಡ್ದನಗಳು ಉಳ್ಳಾಲ್ತಿ ದೈವವು ತುಳುನಾಡಿಗೆ ಪ್ರವೇಶ ಮಾಡಿದ ಕಥನವನ್ನು ಸೊಗಸಾಗಿ ವರ್ಣಿಸುತ್ತವೆ. ಮಾಣಿ, ಅನಂತಾಡಿ, ಕೆಲಿಂಜ, ಕೇಪು , ಬಲ್ನಾಡಿನ ಉಳ್ಳಾಲ್ತಿ ಯರು ಅಕ್ಕ-ತಂಗಿಯರು ಎಂಬ ಎಂಬ ನಂಬಿಕೆ ಪ್ರಾದೇಶಿಕವಾಗಿ ಇದೆ. ಮಾತ್ರ ಅಲ್ಲದೇ ಅವುಗಳೆಲ್ಲವು ಜಿಲ್ಲೆಯಲ್ಲೇ ಅತ್ಯಂತ ಕಾರಣಿಕ ಕ್ಷೇತ್ರಗಳಾಗಿ ಬೆಳಗಿವೆ ಮಾತ್ರ ಅಲ್ಲದೆ ಬೆಳಗುತ್ತಿವೆ.ಸುಳ್ಳಮಲೆ ಯ ತಪ್ಪಲಿನಲ್ಲಿ , ನಿಸರ್ಗದ ಮಡಿಲಲ್ಲಿ ಸ್ತಿತಗೊಂಡಿರುವ ಮಾಣಿ ಉಳ್ಳಾಲ್ತಿ ಅಮ್ಮನವರ ಸನ್ನಿದಿ ಜಿಲ್ಲೆಯಲ್ಲಿ ಸತ್ಯ ಕ್ಕೆ ಮತ್ತು ಕಾರಣಿಕ ಕ್ಕೆ ಹೆಸರುವಾಸಿ. ಕ್ಷೇತ್ರದ ,ಪ್ರಧಾನ ದೈವಗಳ ಅಧಿನಾಯಕಿ ಉಳ್ಳಾಲ್ತಿ ಅಮ್ಮನವರಾಗಿದ್ದು ಗ್ರಾಮದೇವರ ಸ್ವರೂಪಿಣಿಯಾಗಿದ್ದರೆ, ಗುಡ್ಡ ಚಾಮುಂಡಿ , ಪಂಜುರ್ಲಿ, ಮಲೆಕೊರತಿ ಗ್ರಾಮದ ಪ್ರಮುಖ ದೈವಗಳಾಗಿವೆ. ಉಳ್ಳಾಲ್ತಿ ಅಮ್ಮನವರಿಗೆ ಕಾಲಾವಧಿಯಲ್ಲಿ ವರ್ಷದಲ್ಲಿ ಒಂದು ದಿನ ಮೆಚ್ಚಿ ಸೇವೆ ನಡೆದರೆ,ಉಳಿದ ಗ್ರಾಮದ ದೈವಗಳಿಗೆ ಏಳು ಕಡೆ ನೇಮೋತ್ಸವ ಜರಗುತ್ತದೆ. ಪ್ರತೀ ತಿಂಗಳ ಸಂಕ್ರಮಣ ದ ದಿವಸ ಉಳ್ಳಾಲ್ತಿ ಅಮ್ಮನವರ ವಿಶೇಷ ಪೂಜೆ,ಸೇವೆಗಳು ನಡೆಯುತ್ತದೆ. ಈ ದಿವಸವೂ ಗ್ರಾಮಸ್ತರು ಅದಿಕ ಸಂಖ್ಯೆಯಲ್ಲಿ ಮಾತೆಯ ಪ್ರಸಾದ ಪಡೆದು ಕೃತಾರ್ಥರಾಗುತ್ತಾರೆ. ವರ್ಷಕ್ಕೊಮ್ಮೆ ನಡೆಯುವ
ಮಾಣಿ ಮೆಚ್ಚಿ ಜಾತ್ರೆಗೆ ಬೇರೆ -ಬೇರೆ ಊರುಗಳಿಂದ ಜನರನ್ನೊಳಗೊಂಡ ಭಕ್ತ ಸಮೂಹ ಬರುತ್ತಾರೆ. ತಮ್ಮ ಇಷ್ಟಾರ್ಥ ಸಿದ್ದಿಯನ್ನು ಹಾಗೂ ಮಾನಸಿಕ ಸಂತೃಪ್ತಿಯನ್ನು ಈಡೇರಿಸಿದ ಫಲವಾಗಿ ಭಕ್ತರು ಹಣ,ಚಿನ್ನ,ಬೆಳ್ಳಿ ಮೊದಲಾದ ದ್ರವ್ಯದ ರೂಪದಲ್ಲಿ ,ಸೀರೆ,ಮಲ್ಲಿಗೆ ಹೂ,ತುಪ್ಪ,ಎಳನೀರು, ಇತ್ಯಾದಿ ವಸ್ತುಗಳ ರೂಪದಲ್ಲಿ ಹರಕೆಯನ್ನು ಸಲ್ಲಿಸಿ ಪ್ರಸಾದವನ್ನು ಸ್ವೀಕರಿಸಿ ಭಕ್ತರು ಕೃತಾರ್ಥರಾಗುವುದು ಈ ಕ್ಷೇತ್ರದ ವಿಶೇಷತೆ. ಒಂದು ಚೆಂಡು ಮಲ್ಲಿಗೆ ಅಮ್ಮನವರಿಗೆ ಹರಕೆ ಹೊತ್ತು ತಮ್ಮ ಇಚ್ಚಿಸಿದ ಕೆಲಸ ಆದ ಬಗ್ಗೆ ಸಂತೃಪ್ತ ಭಾವದಿಂದ ಜಾತ್ರೆಯಲ್ಲಿ ಪಾಲ್ಗೋಳ್ಳುವ ಪರವೂರಿನ ಭಕ್ತರನ್ನು ನಾವು ಮೆಚ್ಚಿ ಜಾತ್ರೆಯ ದಿವಸ ಅಧಿಕ ಸಂಖ್ಯೆಯಲ್ಲಿ ಕಾಣಬಹುದು. ಆದ್ದರಿಂದ ಈ ಮಾತೆಯಲ್ಲಿ ಪರಮ ಅನುಗ್ರಹ ಶಕ್ತಿ ಇಂದಿಗೂ ಚಿರವಾಗಿದೆ ಎಂಬುದಕ್ಕೆ ಉತ್ತಮ ಉದಾಹರಣೆ.

ಮಾಣಿ ಮೆಚ್ಚಿ ಜಾತ್ರೆಯ ಸರಿಸುಮಾರು ಒಂದು ವಾರದ ಮೊದಲು ಮಕರ ಮಾಸದ 16 ನೇ ದಿನ ( ಜನವರಿ 30 ನೇ ದಿನಾಂಕ)ಗೊನೆ ಮುಹೂರ್ತ ದಿಂದ ಜಾತ್ರೆಯ ಕಾರ್ಯಕ್ರಮ ಕ್ಕೆ ಚಾಲನೆ ಆಗುತ್ತದೆ.ಬಳಿಕ ದ ನಿಗದಿತ ದಿವಸಕ್ಕೆ ನಿಗದಿ ಪಡಿಸಿದ ಮನೆತನದ ತೋಟಕ್ಕೆ ಗ್ರಾಮದ ಸಂಪ್ರದಾಯದಂತೆ ಹೋಗಿ ಜಾತ್ರೆಗೆ ಅಣಿ ತಯಾರಿಸಲು ಹಾಳೆಯನ್ನು ತರುವ ಸಂಪ್ರದಾಯ ದ ಬಳಿಕ ಜಾತ್ರೆಯ ಪೂರ್ವ ತಯಾರಿಗೆ ಚಾಲನೆ ನೀಡಲಾಗುತ್ತದೆ. ಶ್ರೀ ದೇವಿಯು ರಕ್ಕಸರ ರುಂಡ ಚೆಂಡಾಡಿದ ವಿಜಯೋತ್ಸವದ ದ್ಯೋತಕವಾಗಿ ಬಾಕಿಮಾರು ಗದ್ದೆಯಲ್ಲಿ ಚೆಂಡಾಟದ ಸಂಪ್ರದಾಯ ಆಗುತ್ತದೆ. ಅದು ಮೂರು ದಿವಸ ಕಾಲ ಆಗುತ್ತದೆ.ಮೆಚ್ಚಿಯ ಮುಂಚಿನ ದಿನ ಮಕರ ಮಾಸದ ೨೨ನೇ ದಿನ ಬಾಕಿಮಾರು ಗದ್ದೆಯಲ್ಲಿ ಚೆಂಡಾಟದ ಸಂಪ್ರದಾಯ ಕ್ಕೆ ವೈಭವದ ತೆರೆ ಬೀಳುತ್ತದೆ.ನಂತರ ಮಾಣಿ ಗುತ್ತಿನ ಮನೆಯಿಂದ ದೈವಸ್ತಾನಕ್ಕೆ ಭಂಡಾರ ಬಂದು ಧ್ವಜಾರೋಹಣ ಆಗಲಿರುವುದರಿಂದ ಭಂಡಾರ ಬರುವ ರಾಜ ಬೀದಿಯ ನ್ನು ,ಬಾಕಿಮಾರು ಗದ್ದೆಯಿಂದ ‘ದಳಿ’ ನಿರ್ಮಾಣ ಮಾಡಿ ದೀಪ, ತಳಿರು – ತೋರಣಗಳಿಂದ ಅಲಂಕರಿಸುತ್ತಾರೆ.ಮಾಣಿ ಗುತ್ತಿನ ಮನೆ ಯಿಂದ ಗುತ್ತಿನ ಮನೆತನದವರು, ಅರ್ಚಕರು, ದರ್ಶನ ಪಾತ್ರಿಗಳು, ಬಸವ , ದೇವಿಯ ಮುಖವಾಡ, ಆಭರಣ ಅಲಂಕೃತ ಪಲ್ಲಕ್ಕಿಯಲ್ಲಿ ಸಾಗುತ್ತ್ತಿರುವಾಗ ಭಕ್ತರು ದೇವಿಯ ಸ್ವಾಗತಿಸುವುದು ಮತ್ತು ಆಶೀರ್ವಾದ ಭೇಡುವುದು…..ಗ್ರಾಮಸ್ತರ ಮತ್ತು ಭಕ್ತರ…..ಭಕ್ತಿ ಹುಟ್ತಿಸುವ ಅಪೂರ್ವ ಕ್ಷಣಗಳು.ಕಣ್ಣಿಗೆ ಹಬ್ಬ.ಭಂಡಾರ ದೈವಸ್ತಾನದ ತಲುಪಿದ ನಂತರ ಕೊಡಿಯೇರುವ ಸಂಪ್ರದಾಯ ಆಗುತ್ತದೆ.ಮರುದಿನ ಮಕರ ಮಾಸದ 23ನೇ ದಿನ. ಶುಭ ಮುಹೂರ್ತ ದಲ್ಲಿ ಪೂಜೆ ನಡೆದು ಬ್ರಹ್ಮ ರಿಗೆ ಸೇವೆ ಆಗುತ್ತದೆ. ಬಳಿಕ ಉಳ್ಳಾಲ್ತಿ ಅಮ್ಮನವರಿಗೆ ಮೆಚ್ಚಿ ಸೇವೆ ಪ್ರಾರಂಭ ವಾಗುತ್ತದೆ. ದೊಡ್ಡ ಗಾತ್ರದ ಹಾಳೆಯಲ್ಲಿ ನಿರ್ಮಾಣ ಮಾಡಿದ ಅಣಿಯಲ್ಲಿ ಹೂ, ಬೆಳ್ಳಿ, ಚಿನ್ನದ ಆಭರಣ ಧರಿಸಿದ ದೈವ ನರ್ತಕರು ದೇವಿ ಮುಖವಾಡ ಧರಿಸಿ ಪ್ರದಕ್ಷಿಣೆ ಬರುವ ದೃಶ್ಯ , ನೋಡುಗರ ಕಣ್ಣಿಗೆ ಹಬ್ಬ..ಎಂತಹ ನಾಸ್ತಿಕನಲ್ಲೂ ಭಕ್ತಿ ಹುಟ್ಟಿಸುತ್ತದೆ..ಆದುದರಿಂದಲೇ ಪ್ರತಿ ವರ್ಷವೂ ಉಳ್ಳಾಲ್ತಿ ಅಮ್ಮನವರ ಮಾಣಿ ಮೆಚ್ಚಿ ಜಾತ್ರೆಗೆ ಊರ – ಪರವೂರಿನ ಆಸ್ತಿಕ ಭಕ್ತರು ಆಸಕ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here