ವಿಟ್ಲ: ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ ನಡೆಯಬೇಕು. ಬಿಲ್ಲು ಪಾವತಿಯನ್ನು ಎರಡು ತಿಂಗಳಲ್ಲಿ ಆನ್‌ಲೈನ್ ವ್ಯವಸ್ಥೆಗೆ ತರುವುದಾಗಿ ಹೇಳಿಕೊಂಡರೂ ಈ ತನಕ ಜಾರಿಗೆ ಯಾಗಿಲ್ಲ, ತೆರೆದ ಬಾವಿಗೆ ಜಿಎಸ್‌ಟಿ ಹಾಕಿರುವ ವಿಚಾರ ಸ್ಪಷ್ಟನೆ ನೀಡಬೇಕೆಂದು ಬುಧವಾರ ವಿಟ್ಲ ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ಅಧಿಕಾರಿಗಳಲ್ಲಿ ವಿದ್ಯುತ್ ಬಳಕೆದಾರರು ಪ್ರಶ್ನಿಸಿದರು.
ಕೊಳವೆ ಬಾವಿಗಳಿಗೆ ವಿನಾಯಿತಿ ನೀಡಿ ತೆರೆದ ಬಾವಿಗೆ ಇರುವ ಜಿಎಸ್‌ಟಿ ಹಾಕಿರುವ ಬಗ್ಗೆ ಕಳೆದ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಲಾಗಿತ್ತು. ಈ ಬಗ್ಗೆ ಮುಖ್ಯ ಮಂತ್ರಿಗಳಿಗೆ ಬರೆದ ಪತ್ರಕ್ಕೆ ಪರಿಶೀಲನೆ ನಡೆಸುವ ಬಗ್ಗೆ ಉತ್ತರ ಬಂದಿದೆ. ಇಲಾಖೆಯಿಂದ ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ನೆಲ ಜಲ ಸಂಕ್ಷರಣಾ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಪಾಳಿಗೆ ಪ್ರಶ್ನಿಸಿದರು.
ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಮಾತನಾಡಿ ಇಲಾಖೆಯ ಅಂಕಿ ಅಂಶಕ್ಕೆ ಬೇಕಾಗಿ ಕಾಟಾಚಾರಕ್ಕೆ ಸಭೆ ನಡೆಸುವ ಬದಲಾಗಿ ಜನರಿಗೆ ಸಹಾಯವಾಗುವ ರೀತಿಯಲ್ಲಿ ನಡೆಸಿದಾಗ ಸಾರ್ಥಕತೆಯಾಗುತ್ತದೆ. ಸಭೆಯ ಬಗ್ಗೆ ಸಾಕಷ್ಟು ಪ್ರಚಾರವನ್ನು ನೀಡದೆ, ಗ್ರಾಮ ಪಂಚಾಯಿತಿಗಳಿಗೆ ಸೂಕ್ತ ಮಾಹಿತಿ ನೀಡದೇ ಸಭೆ ನಡೆಸಿದರೆ ಪ್ರಯೋಜನ ಎಂದು ಪ್ರಶ್ನಿಸಿದರು.
ಕಳೆದ ಎರಡು ವರ್ಷಗಳಿಂದ ಮೀಟರ್ ಹಾಳಾಗಿರುವುದನ್ನು ದುರಸ್ತಿ ಮಾಡದ ಅಧಿಕಾರಿಗಳ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ವಿಟ್ಲ ಪೇಟೆಯಲ್ಲಿ ಮುಖ್ಯ ಮಾರ್ಗ ಮಾಡುವುದು, ಕಂಬ ಬದಿಗೆ ಹಾಕುವ ವಿಚಾರಗಳು ಚರ್ಚೆಗೆ ಬಂದವು. ಆನ್‌ಲೈನ್ ಮೂಲಕ ಬಿಲ್ಲು ಪಾವತಿಸುವ ವ್ಯವಸ್ಥೆಯನ್ನು ಮಾಡಿಕೊಡುವ ಬಗ್ಗೆ ಸಭೆಯಲ್ಲಿ ಹೇಳಿದರೂ, ಇನ್ನೂ ವ್ಯವಸ್ಥೆಯನ್ನು ಕೊಡುವಲ್ಲಿ ಇಲಾಖೆ ಸಫಲವಾಗಿಲ್ಲ. ಕಳೆದ ಸಭೆಯಲ್ಲಿ ಪ್ರಸ್ತಾಪವಾದ ವಿಷಯಗಳಿಗೆ ಕೇವಲ ಕ್ರಿಯಾಯೋಜನೆ ಮಾತ್ರ ಮಾಡಲಾಗಿದೆ ಹೊರತು ಬೇರಾವುದೇ ಮಾಹಿತಿಯನ್ನು ನೀಡಲಾಗಿಲ್ಲ ಎಂದು ಅಸಮಾಧಾನ ವ್ಯಕ್ತವಾಯಿತು.
ಮೆಸ್ಕಾಂ ಕಾರ್‍ಯ ನಿರ್ವಾಹಕ ಇಂಜಿನಿಯರ್ ಮಾತನಾಡಿ ರಾಮಚಂದ್ರ ಎಂ. ವಿಟ್ಲ – ಉಕ್ಕುಡ ಮಧ್ಯದಲ್ಲಿ ಹೊಸ ಮಾರ್ಗದ ವಿಚಾರದಲ್ಲಿ ಕೆಎಆರ್‌ಸಿಗೆ ಬರೆಯಲಾಗಿದ್ದು, ಅಂದಾಜು ಪಟ್ಟಿಯನ್ನು ಕಳುಹಿಸಲಾಗಿದೆ. ದರದಲ್ಲಿ ಹೆಚ್ಚಳವಾಗಿದ್ದರಿಂದ ಮತ್ತೆ ಅಂದಾಜಿ ಪಟ್ಟಿ ಕೊಡುವ ಹಾಗಾಗಿರುವುದರಿಂದ ಯೋಜನೆ ಜಾರಿಗೆ ವಿಳಂಭವಾಗಿದೆ. ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಆನ್ ಲೈನ್ ಪೇಮೆಂಟ್ ಸಾಧ್ಯವಾಗಿಲ್ಲ ಎಂದು ಸ್ಪಷ್ಟ ಪಡಿಸಿದರು.
ಸಹಾಯಕ ಕಾರ್‍ಯನಿರ್ವಾಹಕ ಇಂಜಿನಿಯರ್ ಪ್ರವೀಣ್ ಜೋಷಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ, ಉಪಾಧ್ಯಕ್ಷ ಜಯಂತ ನಾಯ್ಕ, ಸದಸ್ಯ ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here