ಬಂಟ್ವಾಳ: ಇಸ್ಲಾಮಿನ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರುವ ಮಿತ್ತಬೈಲ್ ಉಸ್ತಾದ್ ಅವರ ಸರಳ ಜೀವನವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ತಲಪಾಡಿ ಬದ್ರಿಯಾ ಜುಮಾ ಮಸೀದಿಯ ಖತೀಬ್ ಸ್ವಾದಿಕ್ ಅಝ್ಹರಿ ಕೊಪ್ಪ ಹೇಳಿದ್ದಾರೆ.
ಅವರು ರವಿವಾರ ತಲಪಾಡಿ ಬದ್ರಿಯಾ ಜುಮಾ ಮಸೀದಿ ವತಿಯಿಂದ ಇತ್ತೀಚೆಗೆ ನಿಧನರಾದ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಉಪಾಧ್ಯಕ್ಷ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಅವರ ಅನುಸ್ಮರಣೆ ಹಾಗೂ ತಹ್ಲೀಲ್ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಉಸ್ತಾದ್ ಅವರು ತಮ್ಮ ಅನಾರೋಗ್ಯದ ಮಧ್ಯೆಯು ದೀನಿ ಕಾರ್ಯಕ್ರಮ ಹಾಗೂ ಪ್ರವಾಸದಲ್ಲಿ ತಮ್ಮ ಜೀವನವನ್ನು ನಿಶ್ವಾರ್ಥ ಸೇವೆಯಲ್ಲಿ ತೊಡಗಿಕೊಂಡಿದ್ದರು. ಉಸ್ತಾದ್ ಅವರ ಬಳಿ ಧಾರ್ಮಿಕ ಜ್ಞಾನಾರ್ಜನೆಗೈದ ಸಾವಿರಾರು ವಿದ್ಯಾರ್ಥಿಗಳು ಹಲವು ಕಾಲೇಜುಗಳಲ್ಲಿ ಬಿರುದು ಪಡೆದು ಉನ್ನತ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.
ಮಂಗಳೂರು ಖಾಝಿಯಾಗುವ ಅವಕಾಶ ಉಸ್ತಾದ್‌ರಿಗೆ ಒದಗಿಬಂದರೂ ನಯವಾಗಿ ನಿರಾಕರಿಸುವ ಮೂಲಕ ಸರಳ ಜೀವನ ನಡೆಸುವ ಆದರ್ಶ ಪ್ರಾಯರಾಗಿದ್ದರು ಎಂದು ಹೇಳಿದರು.
ಮಿತ್ತಬೈಲ್ ಉಸ್ತಾದ್ ಅವರ ಪುತ್ರರಾದ ಇರ್ಷಾದ್ ದಾರಿಮಿ ಹಾಗೂ ಝೈನುಲ್ ಆಬಿದ್ ಅವರು ತಹ್ಲೀಲ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಆಡಳಿತ ಕಮಿಟಿಯ ಅಧ್ಯಕ್ಷ ಇದಿನಬ್ಬ ಕರ್ನಾಟಕ, ಉಪಾಧ್ಯಕ್ಷ ಇದಿನಬ್ಬ ಕೆಎಸ್ಸಾರ್ಟಿಸಿ, ಕೋಶಾಧಿಕಾರಿ ಮುಹಮ್ಮದ್ ಕೆ., ಲತೀಫ್ ಬಿ.ಸಿ., ನಝೀರ್ ಟಿ.ಎಂ. ಹಾಗೂ ಸಮಿತಿ ಸದಸ್ಯರ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಅನ್ನದಾನ ಸಮರ್ಪಣೆ ನಡೆಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here