ವಿಟ್ಲ: ಗ್ರಾಮ ಪಂಚಾಯಿತಿ ಹಣಕಾಸು ವ್ಯವಸ್ಥೆಯನ್ನು ಬಳಕೆ ಮಾಡಿ ಗ್ರಾಮಾಭಿವೃಧ್ಧಿ ಮಾಡುವ ಮೂಲ ಉದ್ದೇಶವಾಗಿರದೇ ಪಂಚಾಯಿತಿ ಮೂಲ ಸೌಕರ್‍ಯಗಳ ಜೊತೆಗೆ ಮಾನವ ಸಂಪನ್ಮೂಲಗಳನ್ನು ಅಭಿವೃಧ್ದಿ ಪಡಿಸಬೇಕಾಗಿದೆ. ಆರೋಗ್ಯವಂತ ಮಾನವ ಸಂಪನ್ಮೂಲ ನಿರ್ಮಾಣವಾದಾಗ ಮಾತ್ರ ಇದು ಸಾಧ್ಯ. ಇದಕ್ಕಾಗಿ ಆರೋಗ್ಯವನ್ನು ಕಾಪಾಡುವ ಸುಲಭ ವಿಧಾನವಾದ ಯೋಗ ಅಭ್ಯಾಸಕ್ಕೆ ಕೊಳ್ನಾಡು ಗ್ರಾಮ ಪಂಚಾಯಿತಿ ಪ್ರೋತ್ಸಾಹ ನೀಡುತ್ತದೆ ಎಂದು ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿಯವರು ಹೇಳಿದರು.
ಅವರು ಕೊಳ್ನಾಡು ಗ್ರಾಮ ಪಂಚಾಯತ್‌ನ ಅಂಬೇಡ್ಕರ್‌ ಭವನದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ನಡೆಯುವ ಒಂದು ತಿಂಗಳ ಯೋಗ ಚಿಕಿತ್ಸ ಶಿಬಿರ ಉದ್ಫಾಟನೆ ನೆರವೇರಿಸಿ ಮಾತನಾಡಿ ಪಂಚಾಯತ್ ವ್ಯವಸ್ಥೆಯಲ್ಲಿ ಇಂತಹ ಕಾರ್‍ಯಕ್ರಮಗಳನ್ನು ನಡೆಸುವ ಉದ್ದೇಶವಿದ್ದು ಸರಕಾರ ಅವಕಾಶವನ್ನು ನೀಡಿದೆ. ಇಂತಹ ಸಮಾಜಮುಖಿ ಕಾರ್‍ಯಕ್ರಮಗಳಿಗೆ ಪಂಚಾಯಿತಿ ಉಚಿತವಾಗಿ ಸ್ಥಳವಕಾಶ ಒದಗಿಸುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತಾನಾಡಿದ ಸಂಪನ್ಮೂಲ ವ್ಯಕ್ತಿ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ತಿರುಮಲೇಶ್ವರ ಪ್ರಸಾದ್ ಮಾತನಾಡಿ ಅಂತಾರಾಷ್ಟೀಯ ಮನ್ನಣೆ ಪಡೆದ ಯೋಗಾಭ್ಯಾಸ ಮಾಡುವುದರ ಮೂಲಕ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಮನಃಶಾಂತಿ ಕೂಡ ದೊರಕುತ್ತದೆ. ಇದಕ್ಕೆ ಪ್ರಾಯದ ಮಿತಿ ಇರುವುದಿಲ್ಲ. ರೋಗವನ್ನು ತಿಳಿದುಕೊಂಡು ಅದಕ್ಕಾನುಸಾರವಾಗಿ ಯೋಗ ಚಿಕಿತ್ಸೆ ನೀಡುವ ಶಿಬಿರ ಇದಾಗಿರುತ್ತದೆ ಎಂದು ಹೇಳಿದರು.
ಸಂಯೋಜಿತ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಎಸ್ಸಿ ಯೋಗ ವಿದ್ಯಾರ್ಥಿ ಆದಿತ್ಯ ಕೃಷ್ಣ ಭಟ್ ಮಾವೆ ಸ್ವಾಗತಿಸಿ ವಂದಿಸಿದರು. ಪಂಚಾಯಿತಿ ಸದಸ್ಯ ವಿಶ್ವನಾಥ ಶೆಟ್ಟಿ ಪೆರ್ಲದಬೈಲು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here