ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆಯ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಉದ್ಯೋಗ ಭರವಸೆ ಕೋಶದ ವತಿಯಿಂದ ಒಂದು ದಿನದ IAS/KAS ಸ್ಪರ್ಧಾತ್ಮಕ ಪರೀಕಾ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು.
ಡಾ. ಕೃಷ್ಣಮೂರ್ತಿ, ಶ್ರೀಹರಿ ಕ್ಲೀನಿಕ್, ಸಿದ್ಧಕಟ್ಟೆ ಇವರು ಮಾತನಾಡುತ್ತ, ದೇಶದ ಆಡಳಿತ ವ್ಯವಸ್ಥೆಯಲ್ಲಿ IAS/KAS ಅಧಿಕಾರಿಗಳ ಪಾತ್ರ ಹಿರಿದಾದುದು. ಪ್ರಾಮಾಣಿಕ ಅಧಿಕಾರಿಗಳಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ನೀವು ಇಂತಹ ಸಾಧನೆಯನ್ನು ಮಾಡಿ ಉನ್ನತ ಹುದ್ದೆಗೆ ಏರಬೇಕು ಎಂಬ ಆಶಾಭಾವನೆಯೊಂದಿಗೆ ತರಬೇತಿಯನ್ನು ಉದ್ಘಾಟಿಸುತ್ತಿದ್ದೇನೆ. ಇಂದಿನ ಜಗತ್ತು ಸ್ಪರ್ಧಾತ್ಮಕ ಜಗತ್ತು, ಸ್ಪರ್ಧಾತ್ಮಕ ಜಗತ್ತಿಗೆ ಕಾಲೇಜುಗಳು ವಿದ್ಯಾರ್ಥಿಗಳನ್ನು ಸನ್ನದ್ದಗೊಳಿಸಲು ಇಂತಹ ತರಬೇತಿಗಳು ಸಹಕಾರಿ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾರ್ಗದರ್ಶನ/ ತರಬೇತಿಗಳ ಅವಶ್ಯಕತೆ ಇರುತ್ತದೆ. ಆದ್ದರಿಂದ ಇಂತಹ ಸ್ಪರ್ಧಾತ್ಮಕ ಪರೀಕಾ ತರಬೇತಿ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸಿ, ಉನ್ನತ ಹುದ್ದೆಗೆ ಏರಲು ಸಹಕಾರಿಯಾಗುತ್ತದೆ ಎಂದರು. ಸಿದ್ಧಕಟ್ಟೆಯ ಈ ಸರಕಾರಿ ಕಾಲೇಜು ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಇಂತಹ ಹತ್ತಾರು ತರಬೇತಿಗಳನ್ನು ಆಯೋಜಿಸುತ್ತಿದೆ. ಅದಕ್ಕಾಗಿ ಕಾಲೇಜಿನ ಪ್ರಾಂಶುಪಾಲರನ್ನು, ಬೋಧಕ ವರ್ಗದವರನ್ನು ಅಭಿನಂದಿಸುತ್ತೇನೆ. ಎಲ್ಲಾ ವಿದ್ಯಾರ್ಥಿಗಳು ತರಬೇತಿಯ ಪೂರ್ಣ ಪ್ರಯೋಜನವನ್ನು ಪಡೆದು ನಮ್ಮ ದೇಶಕ್ಕಾಗಿ ದುಡಿದ ಸಾಧಕರ ಆದರ್ಶಗಳನ್ನು ಪಾಲಿಸಿ, ಬದುಕಿ ಬಾಳಿ ಒಳಿತಾಗಲಿ ಎಂದು ಹಾರೈಸಿದರು.


ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ಭಟ್ ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಇಂತಹ ಸರಣಿ ತರಬೇತಿಗಳನ್ನು ಆಯೋಜಿಸಲಾಗಿದೆ ಎಂದರು.
ಈ ಶಿಬಿರಕ್ಕೆ ಡಾ. ಮಂದಾರ, ಉಪನ್ಯಾಸಕರು, ಸರಕಾರಿ ಪದವಿ ಪೂರ್ವ ಕಾಲೇಜು, ಶೃಂಗೇರಿ, ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಅವರು ವಿದ್ಯಾರ್ಥಿಗಳು IAS/KAS ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು, ಈ ಪರೀಕ್ಷೆಗಳನ್ನು ಎದುರಿಸುವುದು ಹೇಗೆ, ಈ ಪರೀಕ್ಷೆಗಳ ಸಾಮಾನ್ಯ ಸ್ವರೂಪ, ಸಂಭಾವ್ಯ ಪ್ರಚಲಿತ ವಿದ್ಯಮಾದ ಪ್ರಶ್ನೆಗಳು ಹಾಗೂ ವಿವಿಧ ವಿಷಯಗಳನ್ನಾಧರಿಸಿ ತರಬೇತಿ ನೀಡಿದರು.
ರಾಜ್ಯದ ವಿವಿಧ ಭಾಗಗಳ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿ ತರಬೇತಿ ನೀಡುವ ಈ ಯೋಜನೆಯನ್ನು ಕಾಲೇಜಿನ ಇಂಗ್ಲೀಷ್ ಭಾಷಾ ಸಹಾಯಕ ಪ್ರಾಧ್ಯಾಪಕರಾದ ವಿನಯ್ ಎಂ. ಎಸ್ ಸಂಯೋಜಿಸಿದರೆ, ಉದ್ಘಾಟನಾ ಸಮಾರಂಭದ ನಿರೂಪಣೆಯನ್ನು ಕಾಲೇಜಿನ ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಂದ್ರೇಶ್ ಎನ್ ನಿರ್ವಹಿಸಿದರು. ಕಾವ್ಯ ತೃತೀಯ ಬಿ.ಎ. ಸ್ವಾಗತಿಸಿದ ಕಾರ್ಯಕ್ರಮದಲ್ಲಿ, ದೀಕ್ಷಿತಾ ತೃತೀಯ ಬಿ.ಎ. ವಂದಿಸಿದರು. ಕಾಲೇಜಿನ ವಿದ್ಯಾರ್ಥಿ ನಾಯಕ ಸುಕೇಶ್ ಪ್ರಾರ್ಥಿಸಿದರು. ಎಲ್ಲಾ ಬೋಧಕ, ಬೋಧಕೇತರ ವರ್ಗದವರು ಹಾಜರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here