Thursday, October 19, 2023

*ಮಾಡರ್ನ್ ಕವನ* – *ಮಾತೆಯೊಂದಿಗೆ ಯುದ್ಧ*

Must read

ಪದೇ ಪದೇ
ತೊಂದರೆ ಕೊಟ್ಟಾಗಲೂ
ಸುಮ್ಮನಿದ್ದ ನಿಸರ್ಗ ಮಾತೆ
ಇಂದು ಯುದ್ಧಕ್ಕೆ ನಿಂತಳು..!

ಅದಾಗಲೇ ಶೀತಲ ಸಮರ ಏರ್ಪಟ್ಟಿತ್ತು..
ಆಗಾಗ ಅವಳು
ಯುದ್ಧ ಸಾರಿದ್ದಳು.
ಹೌದು ಅಲ್ಲಲ್ಲಿ
ಭೂಕಂಪ ,ಸುನಾಮಿ, ನೆರೆ, ಬಿರುಗಾಳಿ
ಹೀಗೆ ಹಲವು ರೀತಿಯಲ್ಲಿ
ಸಣ್ಣ ಪುಟ್ಟ ಯುದ್ಧ ಕೈ ಗೊಂಡಿದ್ದಳು.
ಸೋತರು ಮಾನವನಿಗೆ ಬುದ್ಧಿ ಬರಲಿಲ್ಲ..!

ನೆರೆ ಬಂದರೆ ನಗರದೊಳಗೆ
ನುಗ್ಗದಂತೆ ಮಾಡಿದನು..!
ಸುನಾಮಿಯ ತಡೆಯುವ ಗೋಡೆಯನ್ನೇ ಸೃಷ್ಟಿಸಿದನು..!
ಭೂಕಂಪಕ್ಕೆ ಅಲುಗಾಡದ ಕಟ್ಟಡವನ್ನೇ ಕಟ್ಟಿದನು..!
ಅಷ್ಟೇ ಅಲ್ಲ
ಭೂಕಂಪದ ಮುನ್ಸೂಚನೆ
ಸುನಾಮಿಯ ಕ್ಷಣ ಗಣನೆ
ಎಲ್ಲಾ ಮೊದಲೇ ತಿಳಿಯುತ್ತಿತ್ತು..!

ಈಗ ಮತ್ತೆ ಸಿಟ್ಟುಗೊಂಡಳು
ಆಮ್ಲಜನಕ ನಿಲ್ಲಿಸಿಬಿಟ್ಟಳು
ಕೆರೆ ಭಾವಿ ನದಿ ಸಿಹಿನೀರನ್ನೇ ಆವಿಯಾಗಿಸಿದಳು..!

ಇದು ಮೊದಲೇ ತಿಳಿದಿತ್ತು ಮಾನವನಿಗೆ..!
ಕೃತಕ ಆಮ್ಲಜನಕ ಸೃಷ್ಟಿಸಿದ್ದ
ಈಗ ಬೆನ್ನಿಗೊಂದು
ಆಮ್ಲಜನಕದ ಚೀಲ ಸಾಮಾನ್ಯವಾಗಿತ್ತು..!
ಸಮುದ್ರದ ನೀರನ್ನೇ ಸಿಹಿಯಾಗಿಸಿದ..!
ಸಮುದ್ರದಂಡೆಯಲ್ಲಿ ಅಲ್ಲಲ್ಲಿ ಸಿಹಿ ನೀರ ಕೇಂದ್ರಗಳು..!

ಅವಳು ಮತ್ತೆ ಸೋತಳು..!
ಗೆದ್ದೆನೆಂದು ಬೀಗಿದವನು ಮೊದಲೇ ಸೋತಿದ್ದ…!
ತಿಳಿಯಲಿಲ್ಲ ಅಷ್ಟೇ…

ಅವಳನ್ನು
ಪ್ರೀತಿಯಿಂದ ಗೆಲ್ಲಬಹುದಿತ್ತು..!

 

✍ಯತೀಶ್ ಕಾಮಾಜೆ

More articles

Latest article