Friday, October 20, 2023

ಸಿದ್ಧಗಂಗ ಮಠದ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ ತಮ್ಮ ಬಾಳನ್ನು ಸಾರ್ಥಕವಾಗಿ ಪೂರೈಸಿದ್ದಾರೆ: ವೀರೇಂದ್ರ ಹೆಗ್ಗಡೆ

Must read

ಶಾಸ್ತ್ರಗಳಲ್ಲಿ ದೇಹ ಮತ್ತು ಆತ್ಮದ ಬೇಧವನ್ನು ತಿಳಿಸಲಾಗಿದೆ. ಆತ್ಮಕಲ್ಯಾಣಕ್ಕಾಗಿ ಮತ್ತು ಸಮಾಜೋನ್ನತಿಗಾಗಿಯೇ ದೇಹವನ್ನು ಬಳಸಬೇಕು ಎನ್ನುವುದು ಭಾರತೀಯರ ನಂಬಿಕೆ. ತಮ್ಮ ಬದುಕನ್ನು ಯಶಸ್ವಿಯಾಗಿ ನಿರ್ವಹಿಸುವುದು ಹೇಗೆ ಎಂಬುದನ್ನು ಸ್ವಾಮೀಜಿಯವರು ತಮ್ಮ ಬದುಕಿನಲ್ಲಿ ಮಾದರಿಯಾಗಿ ಸ್ವಾಮೀಜಿ ತೋರಿಸಿಕೊಟ್ಟವರು. ಬಾಲ್ಯದಿಂದಲೇ ವಿರಕ್ತಿ ಮಾರ್ಗವನ್ನು ಅನುಸರಿಸಿ, ಆತ್ಮೋನ್ನತಿಗಾಗಿ ಪೂಜೆ, ಧ್ಯಾನ, ತಪಸ್ಸು- ಅಂತೆಯೇ ಸಮಾಜದ ಮತ್ತುದೇಶದ ಕಲ್ಯಾಣಕ್ಕಾಗಿ ದೇಹವನ್ನು ಕೊರಡಿನಂತೆ ಸವೆಸಿದರು. ಅವರು ಧಾರ್ಮಿಕರಾದರೂ ಅವರಲ್ಲಿದೇಶ ಭಕ್ತಿ ಆಳವಾಗಿ ನೆಲೆಯೂರಿತ್ತು. ದೇಶ ಉದ್ಧಾರವಾಗಬೇಕಾದರೆ ಜನತೆಯ ಬಡತನ ನಿವಾರಣೆಯಾಗಬೇಕು. ವಿದ್ಯಾರ್ಜನೆಗೆ ಅವಕಾಶಗಳಿರಬೇಕು ಎಂದು ಅವರು ಯೋಜನೆಗಳನ್ನು ಹಾಕಿಕೊಂಡವರು.
ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಸಿದ್ಧಗಂಗ ಮಠದಲ್ಲಿ ಶಿಕ್ಷಣ ಪಡೆದು ತಮ್ಮ ಬಾಳಿನಲ್ಲಿ ಬದಲಾವಣೆಯನ್ನು ಕಂಡರು. ಮೂರು ತಲೆಮಾರುಗಳ ಶಿಕ್ಷಣದಿಂದ ಸಮಾಜದಲ್ಲಿದ್ದ ಜಾತೀಯತೆಯ ಅಂತರಗಳನ್ನು ಹೋಗಲಾಡಿಸಿ ಎಲ್ಲರಿಗೂ ಸಮಾನ ಅವಕಾಶವನ್ನು ನೀಡಿದರು.
ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಸ್ವ-ಉದ್ಯೋಗಕ್ಕೆ ಮಾರ್ಗದರ್ಶನ ನೀಡಿದರು. ಅವರ ಪ್ರೇರಣೆಯಿಂದ ನೂರಾರು ಮಠ-ಮಂದಿರಗಳು ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸಿದವು. ಹಳ್ಳಿ-ಹಳ್ಳಿಗಳಲ್ಲಿ ಶೈಕ್ಷಣಿಕ ಕ್ರಾಂತಿಯಾಯಿತು.
ಪೂಜ್ಯರು ಸರ್ಕಾರಕ್ಕೆ ಮಾರ್ಗದರ್ಶನ ನೀಡುವ ಹಿರಿಯರಾಗಿದ್ದರು. ಕಳೆದ 72 ವರ್ಷಗಳಲ್ಲಿ ಕರ್ನಾಟಕದ ಸರ್ಕಾರಗಳು ರಚನೆಯಾದಾಗ ಪೂಜ್ಯಶ್ರೀಗಳ ಆಶೀರ್ವಾದ ಪಡೆಯಲು ಮುತ್ಸದ್ಧಿಗಳು ಧಾವಿಸುತ್ತಿದ್ದರು. ಪೂಜ್ಯರು ತಮ್ಮ ಹಿರಿತನದಿಂದ ಮಾರ್ಗದರ್ಶನ ನೀಡುತ್ತಾ ಬಂದರು. ಸರ್ಕಾರದ ಅನೇಕ ಜನಪರ ಯೋಜನೆಗಳಲ್ಲಿ ಪೂಜ್ಯರ ಪ್ರೇರಣೆ, ಮಾರ್ಗದರ್ಶನವಿದೆ.ಭಾರತದೇಶದಲ್ಲೆ ಶ್ರೇಷ್ಠ ಸೇವೆಯನ್ನು ಮಾಡಿದ ಮಠಾಧಿಪತಿ ಮತ್ತು ಶ್ರೀ ಮಠ ಎಂದು ಸಿದ್ಧಗಂಗ ಮಠ ಪ್ರಸಿದ್ಧವಾಯಿತು.
ಧರ್ಮಸ್ಥಳಕ್ಷೇತ್ರದ ಬಗ್ಯೆಅಪಾರವಾದ ಪ್ರೀತಿ ಮತ್ತು ಆಶೀರ್ವಾದವನ್ನಿತ್ತಿದ್ದ ಪೂಜ್ಯರು ಅನೇಕ ಬಾರಿಕ್ಷೇತ್ರಕ್ಕೆ ಭೇಟಿಕೊಟ್ಟಿರುವುದನ್ನುಇಲ್ಲಿ ಸ್ಮರಿಸಿ, ಅವರು ಖಂಡಿತವಾಗಿಯೂ ಸ್ವರ್ಗಾರೋಹಣ ಮಾಡಿದ್ದಾರೆ ಎಂಬ ಸ್ಮರಣೆಯೊಂದಿಗೆ ನನ್ನಗೌರವವನ್ನು ಸಲ್ಲಿಸುತ್ತೇನೆ.

(ಡಿ. ವೀರೇಂದ್ರ ಹೆಗ್ಗಡೆಯವರು)

More articles

Latest article