ಬಂಟ್ವಾಳ: ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಪೆರ್ಲ-ಬೀಯಪಾದೆ-ಸರಪಾಡಿ-ಅಜಿಲಮೊಗರು ರಸ್ತೆ ಅಭಿವೃದ್ಧಿ ಮತ್ತು ರೈತರ ಮೂಲಭೂತ ಸೌಕರ್ಯ ಕುರಿತು ಮಣಿನಾಲ್ಕೂರು, ಸರಪಾಡಿ ರೈತ ಹಿತ ರಕ್ಷಣಾ ಸಂಘದ ವತಿಯಿಂದ ಜಿಲ್ಲಾಧಿಕಾರಿ ಅವರಿಗೆ ನೀಡಿದ ಮನವಿ ಮೇರೆಗೆ ಸಹಾಯಕ ಕಮೀಷನರ್ ರವಿಚಂದ್ರ ನಾಯಕ್ ಅವರು ಗುರುವಾರ ಸರಪಾಡಿಗೆ ಭೇಟಿ ನೀಡಿ ಸಮಾಲೋಚನ ಸಭೆ ನಡೆಸಿದರು.
ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ವಠಾರದಲ್ಲಿ ಸಮಾಲೋಚನ ಸಭೆ ನಡೆಯಿತು.
ರೈತ ಹಿತ ರಕ್ಷಣಾ ಸಂಘದ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಅವರು ಮಾತನಾಡಿ, ಜೀವನದಿ ನೇತ್ರಾವತಿಯನ್ನು ಮಣಿನಾಲ್ಕೂರು, ಸರಪಾಡಿ ಗ್ರಾಮಸ್ಥರು ಅವಲಂಬಿಸಿದ್ದು, ಎ.ಎಂ.ಆರ್ ಪವರ್ ಪ್ರಾಜೆಕ್ಟ್ ಕಂಪನಿಯಿಂದ ಶಂಭೂರುನಲ್ಲಿ ನಿರ್ಮಿಸಲಾದ ಅಣೆಕಟ್ಟು, ಎಂಆರ್‌ಪಿಎಲ್ ಪವರ್ ಪ್ರಾಜೆಕ್ಟ್, ಎಸ್‌ಇಝಡ್ ಕಂಪನಿಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕಂಪನಿಗಳು ನೇತ್ರಾವತಿಯನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಿದ್ದಾರೆ. ಆದರೆ ಈ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ. ಈ ಬಗ್ಗೆ ಕಂಪನಿಗಳ ಅಧಿಕಾರಿಗಳಲ್ಲಿ ಮನವಿ ಸಲ್ಲಿಸಿದರೂ ಕಡೆಗಣಿಸಲಾಗಿದೆ. ಸಂಸದ, ಬಂಟ್ವಾಳ ಶಾಸಕ, ಜಿಲ್ಲಾಧಿಕಾರಿ, ವಿಭಾಗಾಧಿಕಾರಿ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಆದುದರಿಂದ ಸಾರ್ವಜನಿಕರೊಂದಿಗೆ ಕಂಪನಿ ಅಧಿಕಾರಿಗಳು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳ ಸಮಕ್ಷಮ ಸಮಾಲೋಚನ ಸಭೆ ನಡೆಸಬೇಕೇಂದು ಹೇಳಿದರು.

ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಪೂಪಾಡಿಕಟ್ಟೆ-ಪೆರ್ಲ-ಬೀಯಪಾದೆ-ಸರಪಾಡಿ-ಅಜಿಲಮೊಗರು ರಸ್ತೆ ವ್ಯಾಪಾರ-ವಹಿವಾಟುಗಳಿಗಾಗಿ   ಹಿಂದೆ ಉಪ್ಪಿನಂಗಡಿ ಸಂಪರ್ಕದ ಬಂಡಿ ರಸ್ತೆ ಎಂದು ಹೆಸರು ಗಳಿಸಿತ್ತು. ಈ ರಸ್ತೆಯನ್ನು ಅಗಲೀಕರಣಗೊಳಿಸಿ ಸರ್ವಋತು ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಬೇಕು. ಈ ರಸ್ತೆಯಲ್ಲಿ ಸರಕಾರಿ ಬಸ್ ಸಂಚರಿಸುವಂತಾಗಬೇಕು. ನದಿಬದಿ ರಸ್ತೆಗೆ ತಡೆಗೋಡೆ ನಿರ್ಮಿಸಬೇಕು ಎಂದು ಹೇಳಿದರು.

ಎಎಂಆರ್ ಅಣೆಕಟ್ಟಿನಿಂದಾಗಿ ಮಳೆಗಾಲದಲ್ಲಿ ಹೆಚ್ಚುವರಿ ನೀರು ನದಿಬದಿಯ ರೈತರ ಕೃಷಿ ನಾಶಕ್ಕೆ ಕಾರಣವಾಗುತ್ತದೆ. ಆದರೆ ಕಂಪನಿ ಈ ರೈತರನ್ನು ಸಂತ್ರಸ್ತರೆಂದು ಗುರುತಿಸದೆ ಯಾವುದೇ ಪರಿಹಾರ ನೀಡುವುದಿಲ್ಲ. ಈ ರೈತರ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಸಹಾಯಕ ಕಮಿಷನರ್ ರವಿಚಂದ್ರ ನಾಯಕ್ ಅವರು ಮಾತನಾಡಿ, ಈಗಾಗಲೇ ಇಲ್ಲಿನ ರೈತರ ಸಮಸ್ಯೆಯನ್ನು ಪರಿಶೀಲಿಸಲಾಗಿದೆ. ಈ ಕಂಪನಿಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ರಸ್ತೆ ಅಭಿವೃದ್ಧಿ, ರೈತರ ಮೂಲಭೂತ ಸೌಕರ್ಯಗಳ ಬಗ್ಗೆ ನಿರ್ದೇಶನ ನೀಡಲಾಗುವುದು. ಮುಂದಿನ ೧೫ದಿನಗಳ ಕಾಲಾವಕಾಶದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಮ್ಮ ಬೇಡಿಕೆಗಳ ಬಗ್ಗೆ ಯುವಕ ಮಂಡಲ ಸರಪಾಡಿ ಮತ್ತು ರೈತ ಹಿತ ರಕ್ಷಣಾ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ರೈತ ಹಿತ ರಕ್ಷಣಾ ಸಂಘದ ಕಾರ್ಯದರ್ಶಿ ಶಿವಪ್ಪ ಪೂಜಾರಿ ಹಟ್ಟತಡ್ಕ, ಪ್ರಮುಖರಾದ ಆದಂ ಕುಂಞ, ರಾಧಾಕೃಷ್ಣ ರೈ, ರಿಚಾರ್ಡ್ ಡಿಸೋಜ, ಜಯಚಂದ್ರ ಆಚಾರ್ಯ, ಯೋಗೀಶ್ ಶೆಟ್ಟಿ ಪಡ್ಡಾಯಿಮಜಲು, ಸತೀಶ್ ಪೈ, ಆನಂದ ಶೆಟ್ಟಿ ಆರುಮುಡಿ, ಸುರೇಂದ್ರ ಪೈ, ಮಾರ್ಷಲ್ ಗೊನ್ಸಾಲ್ವಿಸ್, ಕಂದಾಯ ನಿರೀಕ್ಷಕ ನವೀನ್, ಗ್ರಾಮಕರಣಿಕ ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಸಹಾಯಕ ಕಮಿಷನರ್ ಅವರು ಪೆರ್ಲ-ಬೀಯಪಾದೆ ರಸ್ತೆ, ನದಿಯ ತಡೆಗೋಡೆಗಳನ್ನು ವೀಕ್ಷಣೆ ನಡೆಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here