ಹೊಸ ವರುಷದ ಪ್ಲಾನಿಂಗ್ ಹೇಗಿದೆ? ಬದುಕು ಬದಲಾಗಿದೆಯೇ ಅಂತ ನೀವು ಕೇಳಿದರೆ ಖಂಡಿತಾ ಹೌದೆನ್ನುವೆ. ಕೆಲವು ಗಳಿಸಿದ್ದು, ಕೆಲವು ಕಳೆದುಕೊಂಡದ್ದು. ಹೊಸ ಹೊಸ ಯೋಜನೆಗಳು ಮನದಲ್ಲಿ ಬರದಿರುತ್ತವೆಯೇ? ಅವುಗಳನ್ನು ಸಾಧಿಸಲಾಗದಿದ್ದರೂ ಯೋಜನೆ ಹಾಕದಿರಲಾದೀತೇ? ನನ್ನ ಬ್ಲಾಗ್ http://premaudaykumar.blogspot.com/ ನಿಂದ ಅರವತ್ತು ಭಾವಗೀತೆ ಹಾಗೂ ಕವನಗಳನ್ನು ಒಟ್ಟುಮಾಡಿ ಪುಸ್ತಕ ರೂಪಕ್ಕೆ ಕೊಡುವ ಯೋಜನೆ ಕಾರ್ಯ ರೂಪಕ್ಕೆ ಬಂದಿದೆ. ಒಂಥರಾ ಥ್ರಿಲ್! ಒಂಥರಾ ಖುಷಿ! ಒಂಥರಾ ಭಯ! ಕನ್ನಡ ಸಾರಸ್ವತ ಲೋಕಕ್ಕೆ ನನ್ನ ಮೊದಲ ಕವನ ಸಂಕಲನದ ಬಿಡುಗಡೆಯ ಕೊಡುಗೆ! ಕನ್ನಡಿಗರು ಅದನ್ನು ಹೇಗೆ ಸ್ವೀಕರಿಸುವರೋ ಎಂಬ ತಳಮಳ!
ಕವನಗಳು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತಿವೆ, ಹಾಡುವಂತಿವೆ ಎಂಬೆಲ್ಲಾ ಅಭಿಪ್ರಾಯ ತಿಳಿದವರಿಂದ ಬಂತು. ಖ್ಯಾತ ಲೇಖಕರೂ, ಕವಿಗಳೂ, ಗುರುಗಳೂ, ಹಾವೇರಿ ಜಿಲ್ಲೆಯ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಹಾವೇರಿ ಜಿಲ್ಲಾ ಹನಿಹನಿ ಸಾಹಿತ್ಯ ಬಳಗದ ಅಧ್ಯಕ್ಷರಾದ ಶ್ರೀಯುತ ಜೀವರಾಜ್ ಛತ್ರದ ರವರು ಅಂದವಾದ ಮುನ್ನುಡಿಯನ್ನಿತ್ತು ಹರಸಿದರೆ, ಚಿಕ್ಕಮಗಳೂರು ಜಿಲ್ಲೆಯ ಕನ್ನಡ ಸಾಹಿತ್ಯ ಪರಷತ್ತಿನ ಅಧ್ಯಕ್ಷರಾದ ಶ್ರೀಯುತ ಕುಂದೂರ್ ಅಶೋಕ್ ರವರು ಬೆನ್ನುಡಿಯ ಧಾರೆಯೆರೆದಿರುವರು.
ನನ್ನ ಪ್ರಾಥಮಿಕ ಶಾಲಾ ಕನ್ನಡ ಶಿಕ್ಷಕರೂ, ಶ್ರೀ ಮುಜಿಲ್ನಾಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಈದು, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ಜ್ಞಾನೇಂದ್ರ ಕುಮಾರ್ ಜೈನ್ ರವರೂ, ಹಾಸನದ ಆಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಅರ್ಥ ಶಾಸ್ತ್ರ ಉಪನ್ಯಾಸಕರಾದ ಶ್ರೀಯುತ ಸಿ.ಬಿ. ಮಹೇಶ್ವರಪ್ಪನವರು ನನ್ನ ಪ್ರೌಢಶಾಲಾ ಕನ್ನಡ ಅಧ್ಯಾಪಕರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿ ಶ್ರೀಯುತ ಚೇತನ್ ಸೋಮೇಶ್ವರ ಸರ್ ನನ್ನ ಪಿಯುಸಿಯ ಕನ್ನಡದ ಗುರುಗಳು. ಈ ಮೂರೂ ಜನರ ಆಶೀರ್ವಚನದ ನುಡಿಗಳು ಈ ಪುಸ್ತಕಕ್ಕೆ ಹರಿದು ಬಂದಿದೆಯೆನ್ನಲು ಸಂತಸವಾಗುತ್ತಿದೆ.
ಹಾಗೆಯೇ ಪತ್ರಿಕಾ ಬಳಗದ ಸನ್ಮಿತ್ರರಾದ ಅಣ್ಣ ಅನಂತ್ ಭಟ್ ಹುದಂಗಾಜೆ, ರಾಧಾಕೃಷ್ಣ ಉಳಿಯತ್ತಡ್ಕ, ಲಕ್ಷ್ಮಿ ಮಚ್ಚಿನ, ಮನು ಬಳಂಜ ಮೊದಲಾದವರ ಹಿತನುಡಿಗಳೊಂದಿಗೆ ನಿಮ್ಮ ಕೈಸೇರಲಿದೆ.
‘ಭಾವ ಜೀವದ ಯಾನ,’ ಎಂಬ ಹೆಸರನ್ನು ಹೊತ್ತ ಈ ಪುಸ್ತಕ ‘ಭಾವನೆ ಮತ್ತು ಬದುಕಿನ ಮಧ್ಯೆ ಸಮ್ಮಿಲನ’ ಎಂಬ ಟ್ಯಾಗ್ ಲೈನಿನೊಂದಿಗೆ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ದಿನಾಂಕ 18.1.2019 ಹದಿನೆಂಟು ಜನವರಿಯಂದು ಲೋಕಾರ್ಪಣೆಗೊಳ್ಳಲಿದೆ.
ದೆಹಲಿ ಕನ್ನಡ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಅವರು, ಇಸ್ರೇಲಿನ ತುಳು ಕೂಟದ ಶ್ರೀಯುತ ರಾಜೇಶ ಶೆಟ್ಟಿ ಮಡಂತ್ಯಾರ್ ಅವರು, ಹೆಸರಾಂತ ಕವಿಗಳಾದ ಸುರೇಶ್ ನೆಗಳಗುಳಿಯವರು, ಮನುವೈದ್ಯರವರು, ಪ್ರಕಾಶ್ ಜಿಂಗಾಡೆಯವರು, ಸುಳ್ಯದ ಸಾಹಿತ್ಯ ಪೋಷಕರೂ, ಗುರುಗಳೂ, ಸಮಾಜ ಸೇವಕರೂ ಆದ ಚಂದ್ರಶೇಖರ ಪೇರಾಲ್ ರವರು.. ಹೀಗೆ ಹಲವಾರು ಹೃನ್ಮನಗಳು ಹೃದಯದುಂಬಿ ಹರಸಿರುವ ಈ ಪುಸ್ತಕದಲ್ಲಿ ಎಂತಹ ಕವನಗಳಿವೆ? ಯಾವ ಯಾವ ಭಾವಗೀತೆಗಳಿವೆ ಎಂದು ತಿಳಿಯ ಬೇಕಾದರೆ ಇನ್ನೂ ಹತ್ತು ದಿನ ಕಾಯಬೇಕಾಗಿದೆ! ಈಗಾಗಲೇ ಇನ್ನೂರೈವತ್ತು ಪುಸ್ತಕ ಅಡ್ವಾನ್ಸ್ ಬುಕ್ಕಿಂಗ್ ಆಗಿರುವುದು ಸಂತಸದ ವಿಷಯ!
ನಿಮಗೂ ಬೇಕೆನಿಸುತ್ತಿದೆಯೇ.. ಖಂಡಿತಾ ಸಿಗಲಿದೆ..ಕಾಯ್ದಿರಿಸಿ, ಒಂದು ಈಮೇಲ್ ಸಂದೇಶ ಅಷ್ಟೇ! ಅಥವಾ ಮುಖ ಪುಟದಲ್ಲಿ ಪ್ರೇಮ್ ಉದಯ್ ಕುಮಾರ್ ಎಂದು ಹುಡುಕಿ…ಓದಿ ನೋಡಿ, ಹಾಡಿ, ಆನಂದಿಸಿ.. ಕವಿತೆಗಳ ಸಂಕಲನ… ನಿಮಗಾಗಿ..ನಿಮ್ಮ ಓದಿಗಾಗಿ…ತುಂಬಾ ಅಪ್ ಸೆಟ್ ಆದಾಗ ಓದಿ ಹಗುರಾಗಿ ರಿಲ್ಯಾಕ್ಸ್ ಗಾಗಿ.. ಏನಂತೀರಿ?

 

@ಪ್ರೇಮ್@
premauday184@gmail.com

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here