*ಮೇಕಪ್ ಸೋಲು*

ತಲೆ
ಕೆದರಿದ ಕೂದಲು
ಕೈಲೊಂದು ಬಾಚಣಿಕೆ!
ಶುರುವಾಯಿತು ನೋಡಿ
ಸೌಂದರ್ಯದ ಏಣಿಯಾಟ!
ಬಾಚಿದ ಜಾಗದಲ್ಲಿ ನಿಲ್ಲದ ಕೂದಲು. ಬೈತಲೆಗೆ ವಕ್ರ ಗೊತ್ತೇ ಹೊರತು ಸುಳಿಯದು ಅದರ ಬಳಿ ನೇರ ದಾರಿ. ಇವಳೋ ಮಹಾ ಹಟಮಾರಿ. ತಾಸುಗಟ್ಟಲೆ ತಲೆ ತುಂಬ ಜಾಲಾಡಿಸಿ ಕೂದಲಿನ ಮೇಲೊಂದಿಷ್ಟು ಕೋಪ ತೋರಿಸಿ ಮುಖ ಸಿಂಡರಿಸಿದ್ದೇ ಬಂತು. ಅವು ತಮ್ಮ ಪಾಡಿಗೆ ತಾವು ತಮಗಿಷ್ಟ ಬಂದ ರೀತಿಯಲ್ಲೇ ಪವಡಿಸಿದವು. ಕೊನೆಗೂ ರೋಸಿ ಹೋದ ಅವಳು ತುರುಬು ಬಿಗಿದುಕೊಂಡು ತೆಪ್ಪಗಾದಳು.


*ಇನ್ನು ಮೊಗದ ಪಾಳಿ*
ಪಿಚ್ಚುಗಣ್ಣು, ಕಟಬಾಯಿ ಜೊಲ್ಲುಗಳು ತಾನೂ ವಿಶ್ವ ಸುಂದರಿ ಎಂದು ಬೀಗುತ್ತಿದ್ದ ಮನಕೆ ಭರ್ಚಿಯ ನೆಟ್ಟು ರಕ್ತ ಒಸರುವ ಮುನ್ನ ಹಿರಿದು ಹೊರಗಿಟ್ಟವು.
ಉಗ್ಗಿಕೊಂಡಳು ನೀರು ‘ಪಲ್ ಪಲ್’ ಎಂದು ಮುಖ ಪದ್ಮಕೆ. ತಿಕ್ಕಿ ತಿಕ್ಕಿ ತೊಳೆದಳು ಮುಖ ಕೆಂಪಡರುವಂತೆ. ಆದರೂ ಸಮಾಧಾನವಿಲ್ಲ, ಅತೃಪ್ತಿಯ ಮಾಯಾ ಮೋಡದ ಹಾವಳಿ ಒಳಗೊಳಗೇ. ಮನಸಿಗೆ ನಿಲುಕದು ವ್ಯವಧಾನ. ಏನೋ ತಳಮಳ, ಕಾತರ. ಒಲ್ಲೆನೆನ್ನದ ಬೇಸಿನ್ ಬಿಟ್ಟು ಬಂದಳು ಟವೆಲ್ಲನ್ನು ಮುಖಕ್ಕೆ ಜೋರಾಗಿ ಒತ್ತುತ್ತ. ಥಟ್ಟನೆ ಚೀರಿದಳೊಮ್ಮೆ ಅದು ಗೀರಿದ ನೋವಿಗೆ. ಅಂತೂ ನಮ್ಮ ಸುಂದರಿ ಮತ್ತೆ ಕನ್ನಡಿಯ ಮುಂದೆ ಪ್ರತ್ಯಕ್ಷ!
ಮನ ಮೆಚ್ಚಿದ ಕ್ರೀಂ ಗಳನೆಲ್ಲ ಮೆತ್ತಿಕೊಂಡಳು.ಮೇಲೊಂದಿಷ್ಟು ಪೌಡರು.ಫೈನಲ್ ಟಚಪ್ ಗಾಗಿ ಬಣ್ಣದ ರಾಟೆಯ ತಿರುಗಿಸಿದಳು. ಕೆಂಪು, ಗುಲಾಬಿ, ನೇರಳೆ, ಹಸಿರು, ನೀಲಿ ಎಲ್ಲೆಲ್ಲೋ ಲೇಪಿಸಿ ನೋಡಿದಳು.’ಊಹುಂ’
ಒಂದೂ ತಮ್ಮ ಜಾಗೆಯಲ್ಲಿ ನೆಲೆ ನಿಲ್ಲದೆ ಸಾಮ್ರಾಜ್ಯ ವಿಸ್ತರಣೆಗೆ ಕೈ ಹಾಕಿದ್ದವು. ‘ಹೋಗಲಿ ಬಿಡು’
ತುಸು ಸಮಾಧಾನ ಮಾಡಿಕೊಂಡಳು. ಲಿಪ್ ಸ್ಟಿಕ್ ಕೈಗೆತ್ತಿಕೊಂಡು ತುಟಿ ತುಂಬ ಸವರಿಕೊಂಡಳು. ತುಟಿ ದಾಟಿ ಸಾಗುವ ಅದರ ಉಪಾದ್ಯಾಪಿತನಕ್ಕೆ ಮೈ(ಯೆಲ್ಲ) ಉರಿಯತೊಡಗಿತು. ಪಕ್ಕದಲ್ಲಿದ್ದ ಗುಣಕಲ್ಲನೆತ್ತಿ ಅದರ ತಲೆ ಒಡೆದಳು. ಮತ್ತೆ ಎದುರಿನ ಕನ್ನಡಿ ಹಲ್ಕಿರಿಯಿತು ಅವಳ ವದನದಂದವ ನೋಡಿ. ದಿಕ್ಕೆಟ್ಟ ನಾಜೂಕು ಮಣಿ ಮತ್ತೆ ಬೇಸಿನ್ ಕಡೆಗೋಡಿದಳು. ನಲ್ಲಿ ಶುರುವಿಟ್ಟಿದ್ದೇ ಗೊತ್ತು. ಬಂದ್ ಮಾಡುವ ಕಡೆಗೋಡದ ಮನದ ತಾಳಕ್ಕೆ ಮಣಿದು ಡ್ರೆಸಿಂಗ್ ರೂಂ ಸೇರಿಕೊಂಡಳು. ಗಡಿಯಾರ ತಲೆ ಚಚ್ಚಿತು. ಇದ್ದ ಡ್ರೆಸ್ ನಲ್ಲೇ ಎದ್ದೋಡಿದಳು ಬಾಗಿಲಿನೆಡೆಗೆ. ವ್ಯಾನಿಟಿ ಬ್ಯಾಗು ಹೆಗಲಿಗೇರಿಸಿಕೊಂಡು ‘ಬಿಂದಿ ಇದೆಯಾ’ ಎಂದು ಕೈಯಾಡಿಸಿದಳು ಹಣೆಯ ತುಂಬ,ಸಿಗಲಿಲ್ಲ. ಇಂದಿನ ಸೌಂದರ್ಯ ಸ್ಪರ್ಧೆಯಲಿ ತನ್ನ ಸೋಲಿಗೆ ಉತ್ತರ ಹುಡುಕುತ್ತ ‘ಬಿಂದಿ ಇರದಿದ್ದರೇನಾಯಿತು? ಗಂಡ ಇದ್ದಾನಲ್ಲ!’ ಎಂದುಕೊಂಡ ಜೋರಾದ ಹೆಜ್ಜೆಗೆ ಗೆಜ್ಜೆ ದನಿಯಾದವು.

 


#ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here