


ಬಂಟ್ವಾಳ: ದ.ಕ.ಮತ್ತು ಉಡುಪಿ ಜಿಲ್ಲೆಯಿಂದ ತಿರುಪತಿ ದೇವಾಲಯಕ್ಕೆಂದು ಹೊರಟ ಭಕ್ತರು ಬಸ್ ಚಾಲಕ ನ ಅವಾಂತರ ದಿಂದ ಚನ್ನರಾಯಪಟ್ಟಣ ದಿಂದ ವಾಪಾಸು ಆದ ಘಟನೆ ನಡೆದಿದೆ.
ಈ ಎರಡು ಜಿಲ್ಲೆಯ 28 ಭಕ್ತರು ತಿರುಪತಿ ದೇವಸ್ಥಾನ ಕ್ಕೆ ತೆರಳಲು ನಿರ್ಧರಿಸಿ ಮಂಗಳೂರು ಅನಿಲ್ ಕುಮಾರ್ ಬಿ.ಕೆ ಮಾಲಕತ್ವದ ತಿರುಮಲ ಟ್ರಾವೆಲ್ ಏಜೆನ್ಸಿ ಯಲ್ಲಿ ಉಡುಪಿ, ಕಾರ್ಕಳ, ಕಟಪಾಡಿ, ಹೆಜಮಾಡಿ , ಬಿಸಿರೋಡ್, ಹಾಗೂ ಬ್ರಹ್ಮರಕೋಟ್ಲು ಕಡೆಯಿಂದ
ಬಸ್ ಟಿಕೆಟ್ ಬುಕ್ ಮಾಡಿದ್ದರು. ಒಬ್ಬರಿಗೆ 3400 ರಂತೆ 94 ಸಾವಿರ ರೂ ನೀಡಿದ್ದರು.
ಟಿಕೆಟ್ ನ ದಿನ ನಿಗದಿಯಾದಂತೆ ನಿನ್ನೆ ಮದ್ಯಾಹ್ನ 1 ಗಂಟೆಗೆ ಉಡುಪಿಯಿಂದ ಬಸ್ ಹೊರಡುತ್ತದೆ ಎಲ್ಲರೂ ಸಮಯದಲ್ಲಿ ಹಾಜರಿರುವಂತೆ ಏಜೆನ್ಸಿ ಮಾಲಕ ತಿಳಿಸಿದಂತೆ ಭಕ್ತರು ರೆಡಿಯಾಗಿದ್ದರು.
ಸಮಯಕ್ಕೆ ಸರಿಯಾಗಿ ಬರದ ತಿರುಪತಿ ಹೆಸರಿನ ಬಸ್ ಒಂದು ತಡವಾಗಿ ಆಗಮಿಸಿ ಭಕ್ತರನ್ನು ಹೇರಿಕೊಂಡು ಹೋಗುತ್ತಿತ್ತು.
ರಾತ್ರಿ ವೇಳೆ ಚನ್ನರಾಯಪಟ್ಟಣ ಸಮೀಪಿಸಿದಾಗ ರಾತ್ರಿ ಊಟ ಮಾಡುವ ಉದ್ದೇಶದಿಂದ ಬಸ್ ನಿಲ್ಲಿಸಲಾಗಿತ್ತು.
ಆದರೆ ಚನ್ನರಾಯಪಟ್ಟಣ ದಲ್ಲಿ ನಿಲ್ಲಿಸಿದ ಬಸ್ ನ್ನು ಚಾಲಕ ತಿರುಪತಿ ಕಡೆಗೆ ತಿರುಗಿಸುವ ಬದಲು ವಾಪಾಸು ಮಂಗಳೂರು ಕಡೆಗೆ ತಿರುಗಿಸುವುದಾಗಿ ಭಕ್ತರಲ್ಲಿ ತಿಳಿಸಿದ.
ಭಕ್ತರು ಮಾತ್ರ ಏಕಾಏಕಿ ಯಾಕೆ ಈ ನಿರ್ಧಾರ ಮಾಡಿದೆ ಮತ್ತು ನಾವು ತಿರುಪತಿ ದೇವಾಲಯಕ್ಕೆ ಹೊರಟವರು ನಮಗೆ ಬದಲಿ ವ್ಯವಸ್ಥೆ ಮಾಡಿಕೊಡುವಂತೆ ಪಟ್ಠು ಹಿಡಿದರು ಜೊತೆಗೆ ಸ್ಥಳೀಯ ಪೋಲೀಸ್ ಠಾಣೆಯ ನ್ನು ಪೋನ್ ಮೂಲಕ ಸಂಪರ್ಕಿಸುವ ಪ್ರಯತ್ನ ಪಟ್ಟರು.
ಭಕ್ತರು ಬುಕ್ ಮಾಡಿದ ಏಜೆನ್ಸಿ ಮಾಲಕ ಬಸ್ ಮಾಲಕರಿಗೆ ಪೂರ್ತಿ ಹಣ ಪಾವತಿ ಮಾಡದ ಕಾರಣ ಬಸ್ ಚಾಲಕ ತಿರುಪತಿ ಗೆ ತೆರಳಲು ಸಾಧ್ಯವಿಲ್ಲ ಎಂದು ಒಂದು ಕಾರಣ ಹೇಳಿದರೆ ಇನ್ನೊಂದು ಕಡೆಯಿಂದ ಇಂದು ಭಾರತ್ ಬಂದ್ ಹಿನ್ನೆಲೆಯಲ್ಲಿ ಬಸ್ ಡ್ಯಾಮೇಜ್ ಆದರೆ ನಮಗೆ ಸಮಸ್ಯೆ ಅಗುತ್ತದೆ ಎಂದು ಕಾರಣ ಹೇಳಿ ಬಸ್ ಚನ್ನರಾಯಪಟ್ಟಣ ದಿಂದ ವಾಪಾಸು ಬಿಸಿರೋಡಿಗೆ ಬಸ್ ತಿರುಗಿಸಿದ.
ತಿರುಪತಿ ದೇವಾಲಯಕ್ಕೆಂದು ಹೊರಟ ಭಕ್ತರು ಹೋದ ದಾರಿಗೆ ಸುಂಕವಿಲ್ಲ ಎಂದು ಇಲ್ಲದ ಮನಸ್ಸಿನಿಂದಲೇ ವಾಪಸಾದರು. ಆದರೆ ಏಜೆನ್ಸಿ ಯವರಿಂದ ಮೋಸ ಹೋದ ಭಕ್ತರು ಬಿಸಿರೋಡ್ ತಲುಪುತ್ತಿದ್ದಂತೆ ನೇರವಾಗಿ ಬಂಟ್ವಾಳ ನಗರ ಠಾಣೆಯತ್ತ ಬಸ್ ತಿರುಗಿಸುವಂತೆ ಬಸ್ ಚಾಲಕನಲ್ಲಿ ಒತ್ತಾಯಿಸಿ ಠಾಣೆಗೆ ಕರೆದುಕೊಂಡು ಹೋಗುತ್ತಾರೆ , ಅಲ್ಲಿ ಇವರಿಗಾದ ಅನ್ಯಾಯದ ಬಗ್ಗೆ ದೂರು ನೀಡುತ್ತಾರೆ.
ಇವರ ದೂರು ಆಲಿಸಿ ದ ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಅವರು ಏಜೆನ್ಸಿ ಮಾಲಕ ಅನಿಲ್ ಅವರನ್ನು ಬಂಟ್ವಾಳ ಠಾಣೆಗೆ ಕರೆಯಿಸಿ ವಂಚನೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದಾಗ ಭಕ್ತರಿಗೆ ಬದಲು ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.
ಈ ಬಸ್ ನಲ್ಲಿ 80 ವರ್ಷದ ಅಜ್ಜಿ ಸಹಿತ ಬ್ರಹ್ಮರಕೋಟ್ಲುವಿನ ಮನೆಯೊಂದರ ಕುಟುಂಬದ ಹುಂಡಿಯನ್ನು ಕೊಂಡು ಹೋಗುವ ಭಕ್ತರು ವಾಪಾಸಾಗಿದ್ದಾರೆ.






