


ಗುರುಪುರ : ಇಲ್ಲಿನ ಗೋಳಿದಡಿಗುತ್ತಿನ ಮನೆಯಲ್ಲಿ ಜ. 19ರಂದು ನಡೆಯಲಿರುವ ಶ್ರೀ ರುದ್ರ ಹೋಮ ಹಾಗೂ ‘ಗುತ್ತು ನಿಮಗೆಷ್ಟು ಗೊತ್ತು …?’ ಚಿಂತನ-ಮಂಥನ ಮತ್ತು ಜ. 20ರಂದು ನಡೆಯಲಿರುವ ‘ಪರ್ಬೊದ ಸಿರಿ’ ಅಂಗವಾಗಿ ಮಂಗಳವಾರ(ಜ.8) ಗೋಳಿದಡಿಗುತ್ತಿನಲ್ಲಿ ಪತ್ರಿಕಾಗೋಷ್ಠಿ ಜರುಗಿತು.
ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಎರಡು ದಿನಗಳ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುತ್ತ, “ಗ್ರಾಮೀಣ ಆಡಳಿತ ವ್ಯವಸ್ಥೆಯಲ್ಲಿ ಧರ್ಮ ದೈವಗಳ ಚಾವಡಿಯಿಂದ ಗುತ್ತಿನ ಯಜಮಾನ ಅರ್ಥಾತ್ ಗಡಿಕಾರರು ಗ್ರಾಮೀಣ ಆಡಳಿತ ವ್ಯವಸ್ಥೆ ನಿರ್ವಹಿಸುತ್ತಿದ್ದರು. ಧರ್ಮ ದೇವತೆಗಳೇ ಗುತ್ತಿನ ಕೇಂದ್ರ. ಗುತ್ತು ಒಂದು ವರ್ಗ ಅಥವಾ ಜಾತಿಗೆ ಸೀಮಿತವಾದುದಲ್ಲ. ಅದು ಗ್ರಾಮೀಣ ಜನರಿಗೆ ನೆಮ್ಮದಿ ಮತ್ತು ಸಂವೃದ್ಧಿ ನೀಡುವ ಆಡಳಿತ ವ್ಯವಸ್ಥೆ. ಅಂದಿನ ಆ ವ್ಯವಸ್ಥೆ ಬ್ರಿಟಿಷ್ ಆಳ್ವಿಕೆ ಹಾಗೂ ಗುತ್ತಿನವರ ಕೆಲವೊಂದು ತಪ್ಪು ನಡವಳಿಕೆಯಿಂದ ನಶಿಸಿ ಹೋಗಿದ್ದು, ಅದರ ಪುನರುತ್ಥಾನವೇ ‘ಗುತ್ತು ನಿಮಗೆಷ್ಟು ಗೊತ್ತು ?’ ಗೋಷ್ಠಿಯ ಉದ್ದೇಶವಾಗಿದೆ” ಎಂದರು.
ಒಟ್ಟು ಪ್ರಯತ್ನವು ರಾಜಕೀಯದಿಂದ ಹೊರಗಿದ್ದು, ಮತ್ತೊಂದು ಬಾರಿ ಗುತ್ತುಗಳು ಗ್ರಾಮೀಣ ಪ್ರದೇಶದಲ್ಲಿ ನ್ಯಾಯದಾನದ ತಾಣಗಳಾಗಿ ಕಾರ್ಯ ನಿರ್ವಹಿಸುವಂತಾಗಬೇಕು. ನ್ಯಾಯಾಲಯಗಳಲ್ಲಿ ಬಗೆಹರಿಯದ ವ್ಯಾಜ್ಯಗಳು ಗುತ್ತಿನ ಮನೆಗಳಲ್ಲಿ ಇತ್ಯರ್ಥವಾಗಬೇಕು ಎಂಬ ದೂರಾಲೋಚನೆ ಇಟ್ಟುಕೊಂಡಿದ್ದೇವೆ ಎಂದು ಜಗದೀಶ ಅಧಿಕಾರಿ ಕೆಲ್ಲಪುತ್ಯ ಹೇಳಿದರು.
ಗೋಷ್ಠಿಯಲ್ಲಿ ದಿವಾಕರ ಸಾಮಾನಿ(ಚೇಳಾರುಗುತ್ತು), ರೋಹಿತ್ ಕುಮಾರ್ ಕಟೀಲು(ಮಜಲೊಟ್ಟು ಬೀಡು), ಸುಹಾಸ್ ಹೆಗ್ಡೆ(ನಂದಳಿಕೆ ಚಾವಡಿ ಅರಮನೆ), ಜಯ ಶೆಟ್ಟಿ ಯಾನೆ ಸದಾಶಿವ ಶೆಟ್ಟಿ(ಏತಮೊಗರುಗುತ್ತು), ರಜನಿ ದುಗ್ಗಣ್ಣ(ಕಿನಿಂಜೆಗುತ್ತು), ಎಸ್ ಆರ್ ಪ್ರದೀಪ್(ಪಟ್ಟಬೆಟ್ಟು) ಇದ್ದರು. ಪರಮಾನಂದ ಸಾಲ್ಯಾಲ್ ಸ್ವಾಗತಿಸಿದರೆ, ನವೀನ್ ಶೆಟ್ಟಿ ಎಡ್ಮೆಮಾರ್ ವಂದಿಸಿದರು.
—
ವಿಚಾರಗೋಷ್ಠಿ ಮಾಹಿತಿ :
ಜ. 19ರಂದು ಗುತ್ತು-ಹುಟ್ಟು-ಪರಂಪರೆ-ಆಶಯ ವಿಷಯದಲ್ಲಿ ವಿದ್ವಾಂಸರಾದ ಡಾ. ವೈ ಎನ್ ಶೆಟ್ಟಿ ಪಡುಬಿದ್ರೆ ಹಾಗೂ ಕೆ ಎಲ್ ಕುಂಡಂತಾಯ ವಿಚಾರ ಮಂಡಿಸಲಿದ್ದಾರೆ. ಮಧ್ಯಾಹ್ನ 12.30ರಿಂದ 1.10ರವರೆಗೆ ‘ಗುತ್ತುಗಳ ಗಡಿಕಾರ- ಗಡಿ ನಿರ್ವಹಣೆ, ನಡೆ ಹಾಗೂ ನುಡಿ’ ವಿಷಯದಲ್ಲಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮತ್ತು ಡಾ. ಯಾಜಿ ನಿರಂಜನ ಭಟ್ ವಿಚಾರ ಮಂಡಿಸಲಿದ್ದಾರೆ. ಕೊನೆಯ ಗೋಷ್ಠಿ ‘ಭವಿಷ್ಯದ ಗುತ್ತುಗಳು-ಬೀಡುಗಳು-ಬಾರಿಕೆ-ಬಾವ-ಪರಡಿಗಳ’ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಬೀಡು ಹಾಗೂ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮಾತನಾಡಲಿದ್ದಾರೆ. ದಿನದ ಮೂರು ಗೋಷ್ಠಿಯಲ್ಲೂ ಸಮನ್ವಯಕಾರರಾಗಿ ಗೋಳಿದಡಿಗುತ್ತು ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಹಾಗೂ ನಿರ್ಣಯಕಾರರಾಗಿ ಕೆ ಎಸ್ ನಿತ್ಯಾನಂದ(ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು) ಕಾರ್ಯನಿರ್ವಹಿಸಲಿದ್ದಾರೆ.
ಜ. 20ರಂದು ‘ಪರ್ಬೊದ ಸಿರಿ’ ಜರುಗಲಿದೆ. ಇದು ಮರೆಯಾಗುತ್ತಿರುವ ಗ್ರಾಮೀಣ ಬದುಕಿನ ಮನನ ಕಾರ್ಯಕ್ರಮ. ಇದರಲ್ಲಿ ವಿವಿಧ ರೀತಿಯ ಸರಕು ಮಳಿಗೆಗಳ ಪ್ರದರ್ಶನ ಮತ್ತು ಮಾರಾಟ, ಗ್ರಾಮೀಣರಿಗೆ ಶಕ್ತಿಕಲ್ಲು ಎತ್ತುವ ಸ್ಪರ್ಧೆ, ಸಭಾ ಕಾರ್ಯಕ್ರಮ, ‘ನೃತ್ಯ-ಸಂಗೀತ ವೈವಿಧ್ಯಮಯ’, ಬ್ರಹ್ಮಶ್ರೀ ಶಿರೋಮಣಿ ನಿತ್ಯಾನಂದರಿಂದ ಶ್ರೀ ಮಹಾಕಾಲೇಶ್ವರ ದೇವಸ್ಥಾನಕ್ಕೆ ‘ತುಲಾಧಾರ ಪ್ರತಿಷ್ಠೆ’ ಹಾಗೂ ‘ಕಾಂತಬಾರೆ ಬೂದಬಾರೆ’ ತುಳು ಗೀತಾ ನಾಟಕ, ಸನಾತನ ನೃತ್ಯಾಂಜಲಿ-ಭರತ ನಾಟ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಅಂದು ಸಂಜೆ ೮.೧೫ರಿಂದ ‘ಏಕ್ ಶ್ಯಾಮ್-ರಫಿ ಔರ್ ಕಿಶೋರ್ ಕೀ ನಾಮ್’ ಸಂಗೀತ ರಸಮಂಜರಿ ಜರುಗಲಿದೆ.






