ಲೇಖನ: ರಮೇಶ ಎಂ ಬಾಯಾರು
ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ನಂದನ ಕೇಪು

ಸತ್ಕರಿಸುವುದು ಭಾರತೀಯ ಸಂಸ್ಕೃತಿಯಲ್ಲಿ ಅತೀ ಉನ್ನತ ಸ್ಥಾನವನ್ನು ಪಡೆದಿದೆ. ಮನೆಗೆ ಬಂದವರನ್ನು ಅತಿಥಿಯೆಂದು ವಿಶೇಷ ಮನ್ನಣೆ ನೀಡುವುದನ್ನು ಪ್ರತೀ ಮನೆಯಲ್ಲೂ ಪಾವನ ಕಾರ್ಯ ಎಂದು ನಂಬಲಾಗುತ್ತಿದೆ. ಅತಿಥಿ ದೇವೋ ಭವ ಎಂಬುದು ನಮ್ಮ ವಿಶ್ವಾಸ. ಆದರೆ ಇತ್ತೀಚಿನ ದಿನಗಳಲ್ಲಿ ಅತಿಥಿಯನ್ನು ದೇವರೆಂದು ಭಾವಿಸದೆ ದೆವ್ವವೆಂದು ಗುರುತಿಸುವುದೂ ಇದೆ. ಇದು ಆಧುನಿಕತೆಯ ಮಹಿಮೆಯಾಗಿದೆ.

ಅತಿಥಿಗಳು ಬಂದರೆ ನಮ್ಮ ಏಕಾಂತಕ್ಕೆ ಭಂಗವಾಗುತ್ತದೆ. ಮಕ್ಕಳ ಓದಿಗೆ ಅಡಚಣೆಯಾಗುತ್ತದೆ. ಮನೆಯಲ್ಲಿ ಪಾಕ ಪಂಡಿತರನ್ನು ನೇಮಿಸಬೇಕು. ವಿಶೇಷ ತಿಂಡಿ ಮಾಡಿಸಬೇಕು. ಇದು ಖರ್ಚಿಗೆ ದಾರಿ. ಅವರು ಬಂದು ಹೋಗುವ ತನಕ ಅವರ ತಿರುಗಾಟ, ಬಟ್ಟೆ ಬರೆ ವ್ಯವಸ್ಥೆ ಹೀಗೆ ಬೇರೆ ಬಾಬತ್ತುಗಳಿಗಾಗಿ ಜೇಬು ತೆಳ್ಳಗಾಗುತ್ತದೆ. ಟಿ.ವಿ. ಧಾರಾವಾಹಿಗಳನ್ನು ನೋಡಲಾಗುವುದಿಲ್ಲ. ಇದರಿಂದಾಗಿ ಈ ದಿನ ಸಾವಿತ್ರಿ ಗೇನಾಯಿತೆಂದು ತಿಳಿಯುವುದಿಲ್ಲ. ಹೇಗಾದರೂ ಧಾರಾವಾಹಿ ನೋಡಬಹುದೆಂದರೆ ಬಂದವರ ರುಚಿ ಬೇರೆಯೇ ಇರುತ್ತದೆ. ಹೀಗೆ ಕ್ಷುಲ್ಲಕ ಸಮಸ್ಯೆಗಳ ಸುಳಿಗೊಳಗಾಗುವ ಆತಿಥೇಯರಿಗೆ ಅತಿಥಿಗಳು ದೆವ್ವವಾಗುತ್ತಾರೆ. ಅತಿಥಿಗಳ ಆಗಮನದಿಂದ ಪುಳಕಗೊಳ್ಳುವವರಿಗೆ ಅತಿಥಿಗಳು ದೇವರಾಗುತ್ತಾರೆ.

ಇಂದು ಪ್ರಪಂಚ ಚಿಕ್ಕದಾಗುತ್ತಿರುವುದರಿಂದಾಗಿ ಬಂದ ಅತಿಥಿಗಳು ಹೆಚ್ಚು ದಿನಗಳ ಕಾಲ ನಿಲ್ಲುವುದಿಲ್ಲ. ಬಂದ ದಿನವೇ ಹಿಂತಿರುಗುತ್ತಾರೆ. ಅತಿಥಿಗಳನ್ನು ಹೊರೆಯಾಗಿ ಕಾಣುವವರು ಯಾರ ಮನೆಗೂ ಅತಿಥಿಗಳಾಗಿ ಹೋಗುವುದಿಲ್ಲ. ಇಂಥವರು ಮೊಬೈಲ್‌ಗಳ ಮೂಲಕ ಸುಖ ದುಃಖ ಹಂಚಿಕೊಂಡು ನಿರಾಳರಾಗುವುದೂ ಇದೆ. ಅತಿಥಿಗಳು ಬಂದಾಗ ಅವರೊಂದಿಗೆ ಮನ ನೋಯುವಂತೆ ಮಾತನಾಡುವ ಮತ್ತು ವ್ಯವಹರಿಸುವ ಪರಿಪಾಠ ಕೆಲವರಲ್ಲಿರುವುದಿದೆ. ಇದು ಅತಿಥಿಗಳ ಸಂಖ್ಯೆಯನ್ನು ಇಳಿಕೆಗೊಳಿಸುತ್ತದೆ.

ಬಂದ ಅತಿಥಿಗಳಿಗೆ ಹೊಟ್ಟೆ ಬಿರಿಯುವಂತೆ ತಿನ್ನಿಸಬೇಕೆಂದೇನೂ ಇಲ್ಲ. ಆದರೆ ಹೊಟ್ಟೆತುಂಬುವಂತೆ ಪ್ರೀತಿಯ ಮಾತುಗಳನ್ನಾಡಲು ಎಲ್ಲೂ ಕೊರತೆ ಬರಬಾರದು. ಪ್ರೀತಿಯ ಮಾತುಗಳಿಗಿಂತ ಮಿಗಿಲಾದ ಸತ್ಕಾರವಿಲ್ಲ. ನಮ್ಮಲ್ಲಿಗೆ ಅತಿಥಿಗಳು ಬಂದ ಕೂಡಲೇ ಹಲವು ’ಕಂಡಿಷನ್’ಗಳನ್ನು ಆತಿಥೇಯರ ಮುಂದಿಡುವುದೂ ಇದೆ. ಉದಾಹರಣೆಗೆ ತನಗೆ ಶವರ್ ಬಾತ್ ಬೇಕು. ತಾನು ಕುಡಿಯುವುದು ಹಾರ್ಲಿಕ್ಸ್ ಮಾತ್ರ. ಹೀಗೆ ಹಾಕುವ ನಿರ್ಬಂಧಗಳು ಆತಿಥೇಯರನ್ನು ದಿಗಿಲುಗೊಳಿಸುತ್ತವೆ. ಇದರಿಂದಾಗಿ ಆತಿಥೇಯರು ಪ್ರತೀ ಹಂತದಲ್ಲೂ ಗೊಂದಲವನ್ನು ಎದುರಿಸುತ್ತಾರೆ. ಬಂದ ಅತಿಥಿಗಳೂ ಸಣ್ಣ ಪುಟ್ಟ ಹೊಂದಾಣಿಕೆಯೊಂದಿಗೆ ನಿರ್ಬಂಧಗಳಲ್ಲಿ ರಾಜಿಯಾಗಿದ್ದು ಆತಿಥೇಯರ ಮನಸ್ಸಿನಲ್ಲಿ ಗೊಂದಲಗಳಾಗದಂತೆ ಸಹಕರಿಸಬೇಕು.

ಒಂದೊಮ್ಮೆ ನೆಂಟರೊಬ್ಬರು ರಾತ್ರಿಗೆ ಊಟಕ್ಕೆ ಬರುವುದಾಗಿ ತಿಳಿಸಿದರು. ಮನೆಯಲ್ಲಿ ಬರುವೆವೆಂದ ಐದಾರು ಅತಿಥಿಗಳನ್ನೂ ಗಮನದಲ್ಲಿರಿಸಿಕೊಂಡು, ಎಲ್ಲರಿಗೂ ಬೇಕಾಗುವಷ್ಷು ವಿವಿಧ ಭಕ್ಷ್ಯ ಭೋಜ್ಯಗಳನ್ನು ತಯಾರಿಸಿ ಸತ್ಕಾರ ಸಿದ್ಧತೆ ನಡೆಯುತ್ತಿತ್ತು. ರಾತ್ರಿ ಘಂಟೆ ಎಂಟು ದಾಟಿದರೂ ಯಾವ ಅತಿಥಿಯ ಸುಳಿವೂ ಕಾಣಲಿಲ್ಲ. ಆಗ ಅನಿವಾರ್ಯವಾಗಿ ಬರಬೇಕಾಗಿದ್ದ ಅತಿಥಿಗಳಿಗೆ ಕರೆ ನೀಡಲಾಯಿತು. ಅವರು ಹೇಳಿದ್ದು ಇಷ್ಟೇ. ಸಾರಿ… ನಾಳೆ ಬರುತ್ತೇವೆ ಎಂದು. ಹೇಗಾಗಬೇಡ ನಮ್ಮ ಮನಸ್ಸು? ’ಮಾಡಿದ್ದುಣ್ಣೋ ಮಹಾರಾಯ’ ಎನ್ನುವಂತೆ ಆ ದಿನದ ಎಲ್ಲ ತೊಂದರೆಗಳಿಗೆ ಹಿಡಿ ಶಾಪವೊಂದೇ ಪರಿಹಾರವಾಯಿತು. ಇಂತಹ ಘಟನೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸುವುದೂ ನಮಗೆ ರೂಢಿಯಾಗಬೇಕು. ಅತಿಥಿಗಳಾಗಿರಲೀ ಆತಿಥೇಯರಾಗಿರಲೀ ಯಾವುದೇ ಬದಲಾವಣೆಗಳನ್ನು ಸಕಾಲದಲ್ಲಿ ಪರಸ್ಪರ ವಿನಿಮಯಿಸಿಕೊಂಡು ಸಹಕರಿಸಿದಾಗ ಹಾದಿ ಸುಗಮವಾಗುತ್ತದೆ. ಯಾರೂ ದೆವ್ವಗಳಾಗಿರದೆ ಇರುವುದು ಆತಿಥ್ಯದ ಮೆರುಗನ್ನು ಎತ್ತರಿಸುತ್ತದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here