ಬಂಟ್ವಾಳ: ತುಂಬೆ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಪಂಪ್ ನಿರ್ವಹಣೆಯ ಶೆಡ್‌ ಅನ್ನು ಪಂಚಾಯತ್ ಅನುಮತಿ ಪಡೆಯದೇ ಗುತ್ತಿಗೆದಾರೊಬ್ಬರು ಕೆಡವಿ ನೆಲಸಮ ಮಾಡಿದ್ದಾರೆ ಎಂದು ತುಂಬೆ ಗ್ರಾಪಂ ಉಪಾಧ್ಯಕ್ಷ ಪ್ರವೀಣ್ ತುಂಬೆ ಆರೋಪಿಸಿದ್ದಾರೆ.
ಎಂಎಲ್‌ಸಿ ಐವನ್ ಡಿಸೋಜ ಅವರ ಅನುದಾನದಿಂದ ರಾಷ್ಟ್ರೀಯ ಹೆದ್ದಾರಿಯ ತುಂಬೆ ಜಂಕ್ಷನ್ ಬಳಿ ರಿಕ್ಷಾ ಪಾರ್ಕಿಂಗ್ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಈ ಬಗ್ಗೆಯು ಪಂಚಾಯತ್‌ನಿಂದ ಯಾವುದೇ ಅನುಮತಿ ಪಡೆದಿರುವುದಿಲ್ಲ. ಇಲ್ಲಿ ರಿಕ್ಷಾ ಪಾರ್ಕಿಂಗ್ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಗ್ರಾ.ಪಂ. ಗಮನಕ್ಕೂ ತಾರದೆ ಹಾಗೂ ಅನುಮತಿ ಪಡೆಯದೇ ರಿಕ್ಷಾ ಪಾರ್ಕಿಂಗ್ ಗುತ್ತಿಗೆ ವಹಿಸಿಕೊಂಡವರು ಮಂಗಳವಾರ ರಾತ್ರಿ ಏಕಾಏಕಿ ಪಂಪ್ ನಿರ್ವಹಣೆಯ ಶೆಡ್‌ಅನ್ನು ಕೆಡವಿ ನೆಲಸಮ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.


ಈ ವಿಚಾರವಾಗಿ ಇಂದು ಬೆಳಿಗ್ಗೆ ಗ್ರಾಪಂ ಸದಸ್ಯರ ಸಹಿತ ಉಪಾಧ್ಯಕ್ಷ ಪ್ರವೀಣ್ ಅವರ ನೇತೃತ್ವದಲ್ಲಿ ತುಂಬೆ ಜಂಕ್ಷನ್‌ನಲ್ಲಿ ಧರಣಿ ನಡೆಯಿತು. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಸಹಿತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆದರು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಹಾಗೂ ಗುತ್ತಿಗೆದಾರರ ನಡುವೆ ಮಾತಿನ ಚಕಮಕಿ ನಡೆಯಿತು. ತಹಶೀಲ್ದಾರ್ ಅವರು ಸ್ಥಳಕ್ಕೆ ಆಗಮಿಸುವಂತೆ ಧರಣಿ ನಿರತರು ಪಟ್ಟು ಹಿಡಿದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದರು.
ಮಧ್ಯಾಹ್ನದ ಹೊತ್ತಿಗೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಸ್ಥಳ ಪರಿಶೀಲನೆ ನಡೆಸಿ, ಪಿಡಿಒ ಹಾಗೂ ಪಂ. ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ, ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.

ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದು. – ಪ್ರವೀಣ್ ತುಂಬೆ, ಗ್ರಾಪಂ ಉಪಾಧ್ಯಕ್ಷ


ತುಂಬೆ ಗ್ರಾಮಸ್ಥರ ಬಹುಬೇಡಿಕೆಯಾಗಿರುವ ರಿಕ್ಷಾ ಪಾರ್ಕಿಂಗ್ ನಿರ್ಮಾಣಕ್ಕೆ ಎಲ್‌ಎಲ್ಸಿ ಅನುದಾನ ಮಂಜುರಾಗಿದ್ದು, ಇದರ ಕಾಮಗಾರಿಯು ನಡೆಯುತ್ತಿದೆ. ಇದಕ್ಕೆ ಸ್ಥಳೀಯ ವಾಣಿಜ್ಯ ಕಟ್ಟಡ ಮಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕು ಗ್ರಾ.ಪಂ. ಶೆಡ್ ಕೆಡವಿದ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ರಿಕ್ಷಾ ಪಾರ್ಕಿಂಗ್ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿ ಪಂಚಾಯತ್‌ನೊಂದಿಗೆ ಮನವಿ ಮಾಡಲಾಗುವುದು.
-ಅಮೀರ್ ತುಂಬೆ, ಸಾಮಾಜಿಕ ಹೋರಾಟಗಾರ

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಪಿಡಿಒ ಹಾಗೂ ಪಂಚಾಯತ್ ಅಧ್ಯಕ್ಷರೊಂದಿಗೆ ವರದಿ ನೀಡುವಂತೆ ತಿಳಿಸಿದ್ದೇನೆ. ಅದಲ್ಲದೆ, ಗ್ರಾಪಂನ ದೂರಿನ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ.
-ಪುರಂದರ ಹೆಗ್ಡೆ, ತಹಶೀಲ್ದಾರ್

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here