ಬಂಟ್ವಾಳ: ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮಪಂಚಾಯತ್ ವತಿಯಿಂದ ಮಂಗಳೂರು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಸೊಸೈಟಿ ಅಂಧತ್ವ ವಿಭಾಗ, ಡಾ| ಪಿ. ದಯಾನಂದ ಪೈ ಮತ್ತು ಡಾ| ಸತೀಶ್ ಪೈ ಸೆಂಚುರಿ ಗ್ರೂಪ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಮಣಿನಾಲ್ಕೂರು ಗ್ರಾ.ಪಂ. ಸಭಾಂಗಣದಲ್ಲಿ ರವಿವಾರ ಜರಗಿತು.
ಮಂಗಳೂರು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞೆ ಡಾ| ಕ್ರಿಸ್ ಡಿ ಸೋಜ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳ ಮಧ್ಯೆ ಬದುಕುತ್ತಿರುವ ಬಡ ಜನತೆಯ ಆರೋಗ್ಯ ಸೇವೆ ಒದಗಿಸುವ ಮೂಲಕ ಸಮಾಜದ ಒಳಿತಿಗೆ ಶ್ರಮಿಸುವುದು ಪುಣ್ಯ ಕಾರ್ಯವಾಗಿದೆ ಎಂದರು. ಒತ್ತಡ, ಅಜಾಗರೂಕತೆಯಿಂದ ಕಣ್ಣಿನ ಆರೋಗ್ಯ ಹಾಳಾಗುತ್ತದೆ. ಇಂತಹ ಶಿಬಿರಗಳನ್ನು ಸದುಪಯೋಗಪಡಿಸಿಕೊಂಡು ಕಣ್ಣಿನ ಆರೋಗ್ಯದ ಬಗ್ಗೆ ಅರಿತು, ಸಂರಕ್ಷಿಸಿರಿ ಎಂದು ಹೇಳಿದರು.
ಗ್ರಾ.ಪಂ.ಅಧ್ಯಕ್ಷೆ ಗೀತಾ ಶ್ರೀಧರಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಶಿವಪ್ಪ ಪೂಜಾರಿ ಹಟದಡ್ಕ, ಧರಣೇಂದ್ರ ಜೈನ್, ಫಾರುಕ್, ಡೆನಿಸ್ ಮೊರಾಸ್, ಮಾವಿನಕಟ್ಟೆ ಸ.ಹಿ.ಪ್ರಾ.ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ಅಬ್ಬಾಸ್, ಶಾಲಾ ಮುಖ್ಯ ಶಿಕ್ಷಕಿ ಕಸ್ತೂರಿ, ಗ್ರಾ.ಪಂ.ಸಿಬಂದಿ ವರ್ಗ, ಮತ್ತಿತರರು ಉಪಸ್ಥಿತರಿದ್ದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಸಂತಿ ಸ್ವಾಗತಿಸಿದರು. ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ನಿಶ್ಚಿತ್ ಶೆಟ್ಟಿ ಪ್ರಸ್ತಾವಿಸಿದರು. ಗ್ರಾ.ಪಂ.ಸದಸ್ಯ ಆದಂ ಕುಂಞ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಶಿಬಿರದಲ್ಲಿ ನೂರಕ್ಕೂ ಮಿಕ್ಕಿ ಗ್ರಾಮಸ್ಥರ ಕಣ್ಣು ಪರೀಕ್ಷೆ ನಡೆಸಲಾಯಿತು. ಅರ್ಹ ಫಲಾನುಭವಿಗಳಿಗೆ ಕಣ್ಣಿನ ಉಚಿತ ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆಗೊಳಿಸಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here