ನೀನಿರದ ರಾತ್ರಿಗಳಿಗೆ ಆವರಿಸಿ ಶೂನ್ಯ ನರಳಿವೆ ಇಡಿಯಾಗಿ ಇನ್ನಿಲ್ಲದಂತೆ/
ಜೊತೆಗೂಡಿದ ಅನಾಥ ಭಾವ ಕಾಡಿದೆ ಪ್ರಜ್ಞೆಯ ಸಾಕ್ಷಿಯಾಗಿ ಇನ್ನಿಲ್ಲದಂತೆ//

ಹಿಂಡಿ ಹಿಪ್ಪೆ ಮಾಡಿದೆ ಮಂಕು ಕತ್ತಲು ಆಗದ ನಿರಾಯಾಸ ವಿಶ್ರಾಂತಿ/
ಏನು ತೋಚದೆ ಕಗ್ಗತ್ತಲು ಸಿಡಿದಂತಾಗಿದೆ ಹಾಗೆ ಮಿಂಚಾಗಿ ಇನ್ನಿಲ್ಲದಂತೆ//

ಗಾಢ ಮೌನ ಮೊದಲ ಬಾರಿ ಕಿರುಚಾಡಿದ ಭೀತಿ ಕರಾಳ ಅನುಭವ/
ಹಿಮ್ಮಡಿಯಲ್ಲಿ ಹಿಮ್ಮೆಟ್ಟಿಸಿದೆ ಕರ್ಕಶ ಧ್ವನಿ ಭೀಕರ ಸದ್ದಾಗಿ ಇನ್ನಿಲ್ಲದಂತೆ//

ನೋಡಲಾರೆ ಹೊರ ಗೂಬೆ ಬಾವಲಿಗಳು ಎದ್ದಂತಿವೆ ಕದಲಿ ತೂಕಡಿಕೆಯಿಂದ/
ತಂಗಾಳಿಯ ಮೆದು ಸ್ಪರ್ಶ ಬಿರುಸೆನಿಸಿ ಕನಲಿದೆ ನಡುಕಾಗಿ ಇನ್ನಿಲ್ಲದಂತೆ//

ತಿಳಿ ಬೆಳದಿಂಗಳು ಒಂಟಿ ನಕ್ಷತ್ರಕ್ಕೂ ಬಿಡದ ಕಲಹ ಜಂಟಿ ಯಾತನೆ ಮುನಿಸು/
ಚೆಲ್ಲಿ ಬೆಳಗು ಉದುರಿದ ಹೊಳಪು ಏನೋ ಕಳೆದುಕೊಂಡಂತಾಗಿ ಇನ್ನಿಲ್ಲದಂತೆ//

ನಿನ್ನ ಶುಭ ರಾತ್ರಿಯ ಹಿತ ನುಡಿ ಜೋಗುಳ ಲಾಲಿ ಸಾಕಿತ್ತು ಸವಿ ನಿದ್ರೆಗೆ/
ಪರಿತಪಿಸಿ ಓಡಿ ಬರಬೇಕು ಎಂದೆನಿಸಿದೆ ಹೇಗೇಗೋ ಹೀಗಾಗಿ ಇನ್ನಿಲ್ಲದಂತೆ//

ಕೂರಲು ನಿಲ್ಲಲು ಆಗದ ಒದ್ದಾಟ ಒಂದೇ ಸಮನೆ ಆ ಕಡೆಯಿಂದ ಈ ಕಡೆಗೆ/
ಹೇಗಾದರೂ ಸಹಿಸುವೆ ನಿನ್ನ ಸಂಧಿಸುವ ಮುಂಜಾವಿಗಾಗಿ ಇನ್ನಿಲ್ಲದಂತೆ//

ಬಸವರಾಜ ಕಾಸೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here