Friday, October 27, 2023

ಎದುರು ನೋಡುತ್ತಿದೆ ಅಳಲು ಕಣ್ಣು

Must read

ಚೂರು ಬರಗೆಟ್ಟಿದ್ದರೆ ಚೆಂದ ಇತ್ತೇನೋ
ಸುರಿಸಬಹುದಿತ್ತು ಅನಿಸುತ್ತೆ ಧಾರಾಕಾರ
ಕೊರಗಿ ಕೊನಲಿ ಬರಡಾಗಿದೆ ಅಳು
ತಿಣುಕಿದರೂ ಜಾರದ ಹನಿ ತುಂಬಾ ಭಾರ

ನನ್ನಲ್ಲಿಯೂ ತುಂಬಿ ತುಂಬಿ ಬರುತ್ತಿದ್ದ
ಆ ಕಣ್ಣೀರ ಆಣೆಕಟ್ಟೆಯ ಕಾಲವೊಂದಿತ್ತು
ಹಿಡಿದಿಡಲು ಎಲ್ಲಿ ಸೋತಿತು ಏನೋ
ನೆರೆಯಾಗಿ ಉಕ್ಕಿ ಬಾರದಂತೆ ಜಾರಿತು

ದುರ್ಬಲವಾಗಿತ್ತೆ ಮನ ಎಂದು ಯೋಚಿಸಿ
ಇಂಗಿ ಹೋದ ನೀರಿಗೆ ಚಿಂತೆ ಇಂದಿಗೂ
ಎದುರು ನೋಡುತ್ತಿದೆ ಅಳಲು ಕಣ್ಣು
ಹಗುರಾಗಿಸಲು ಇಂದು ಬರುವುದೆಂದು

ಬೇಸರಗಳ ಮೋಡ ಬಿತ್ತನೆ ದಿನ ನಿತ್ಯ
ಏನು ಮಾಡಲಿ ನೀಗಿಕೊಳ್ಳಲು ನಾನಿದಕ್ಕೆ
ಈ ಕೊರತೆ ಮರು ಕಳಿಸಿದೆ ನೋವು
ಒಳಗಿಂದ ಒಳಗೆ ಅದೆಷ್ಟು ಕಿಡಿಯ ಜ್ವಾಲೆ

ಅದು ಬರುವವರೆಗೆ ಬಾಗದ ಬಳಲಿಕೆ
ವ್ಯರ್ಥ ಮಾಡಬಾರದಿತ್ತು ಬೇಡದಕ್ಕೆ ಹೆಚ್ಚು
ಅಳುವವರ ನೋಡಿ ಪರಿತಪಿಸುವ ಖುಷಿ
ಆ ಭಾಗ್ಯವೂ ಇಲ್ಲದ ಬಾಳು ಹುಚ್ಚು

ಬಸವರಾಜ ಕಾಸೆ

More articles

Latest article