ಕಲಾಮಯ

 

ನಂದು ಅವಳದ್ದು
ಏಳೇಳು ಜನುಮದ ಲವ್
ನಾ ನಿಮಗೆ ಹೇಳುತ್ತಿರುವುದು
ಎರಡೇ ಜನ್ಮದ ನೋವು ನಲಿವು

ಮೊದಲ ಜನ್ಮದ ಕಥೆ ಇಷ್ಟೇ
ಊರ ಜಾತ್ರೆಯಲ್ಲಿ ಕಿಕ್ಕಿರಿದ ಜನರ ಮಧ್ಯೆ
ತಂಗಿಯ ಕೈಯ ಬದಲು ಹಿಡಿದದ್ದು ಅವಳ ಕೈ…
ಮೊದಲ ಸ್ಪರ್ಶ ಮೊದಲ ನೋಟ
ಅಲ್ಲಿಂದಲೇ ಶುರು ಪ್ರೀತಿ ಆಟ

ನಮ್ಮೂರ ಹಾದಿಯ ಕೊನೆಯಲ್ಲಿ ಅವಳ ಮನೆ
ಅಲ್ಲಿಂದ ಹೋದಾಗ ಕಾಯುತ್ತಿರುವಳು ನನ್ನೇ
ಅಂಗಳಕ್ಕೆ ಸೂರ್ಯನ ಕಿರಣ ಬಿದ್ದರೆ
ಅವಳಿಗೆ ನಾ ಬರುವ ಹೊತ್ತಿನ ಅಲರಾಮ್
ಅವಳ ಹೆಜ್ಜೆಯ ಗೆಜ್ಜೆಯ ಸದ್ದೆ
ನನಗೆ ಮಿಸ್ ಕಾಲ್
ಮನೆಯ ಮುಂದಿನ ಆಲದ ಮರವೇ ಪೋಸ್ಟಾಫಿಸು
ಮಿತಿಯಿಲ್ಲದೆ ಜಾಗ ಬಿಡದೆ ಬರೆದ ಪತ್ರದಲ್ಲೇ ಮಾತುಕಥೆ

ಊರೆಲ್ಲ ಜಾತಿಯ ಅಂಧಕಾರದಲ್ಲಿ ಮುಳುಗಿರಲು
ಜಾತಿಯ ಲೆಕ್ಕಿಸದೆ ಚಿಗುರಿತ್ತು ಪ್ರೀತಿಯು
ನಾಕಾರು ವರುಷ ಮುಚ್ಚಿಟ್ಟ ಪ್ರೀತಿ
ಊರೆಲ್ಲ ಸುದ್ದಿ ಆಗುವ ಮುನ್ನ
ಕತ್ತಲಲ್ಲೆ ಕೈ ಹಿಡಿದು ಪರ ಊರ ಸೇರಿದ್ದು
ದೇವಸ್ಥಾನ ದಲ್ಲೇ ಮಾಂಗಲ್ಯ ಬಿಗಿದು
ಮನದಲ್ಲೇ ಪ್ರೇಮ ಗೋಪುರ ಕಟ್ಟಿ ಬದುಕಿದ್ದು..
ಏಳೇಳು ಜನ್ನ ನೀನೇ ನನ್ನವಳು ಅಂದದ್ದು..

ಇನ್ನೊಂದು ಜನ್ಮದಲ್ಲಿ ಇಷ್ಟೇನು ಕಷ್ಟ ಪಟ್ಟಿಲ್ಲ
ಫೇಸ್‌ಬುಕ್‌ ನಲ್ಲಿ ಫ್ರೆಂಡ್ ಆಗಿ
ದಿನವಿಡೀ ಚಾಟ್ ಮಾಡಿ
ವಾಟ್ಸ್ ಅಪ್ ನಂಬರ್ ಕೊಟ್ಟು
ಆಗಾಗ ಮೀಟ್ ಅಗಿ
ಮುತ್ತುಗಳ ಸುರಿಮಳೆಗೈದು
ಇಂಟರ್ನೆಟ್ ನಲ್ಲೇ ಕಾಮಾದಾಟ ಆಡಿ
ಅಪ್ಪನಿಗೆರಡು ಮಾತು ಬೈದು
ರಿಜಿಸ್ಟ್ರಾರ್ ಆಫೀಸ್ನಲ್ಲಿ ಹಾರ ಬದಲಾಯಿಸಿ
ಬಾಡಿಗೆ ಮನೆಯಲ್ಲಿ ಸಂಸಾರ ಮಾಡಿ
ಈ ಜನ್ಮ ಪೂರ್ತಿ ಆಗುವ ಮುನ್ನ
ಬಡಿದಾಡಿ ಡೈವೊರ್ಸ್ ಕೊಟ್ಟು
ಬೇರೆ ಹುಡುಗಿಯ ಹುಡುಕಲಾಯಿತು….?!

ಸಂಬಂಧಗಳನ್ನು
ನೆಟ್ ನಲ್ಲಿ ಹುಡುಕುವ ಕಾಲದಲ್ಲಿ
ಯಾರು ನಮ್ಮವರೋ….!?